ಪಣಜಿ, ಮಾ 15 (DaijiworldNews/DB): ಗೋವಾದಲ್ಲಿ ಸರ್ಕಾರ ರಚಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಹಂಗಾಮಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದು, ಪಕ್ಷದ ಅಧ್ಯಕ್ಷ ಜೆ. ಪಿ. ನಡ್ಡಾ ಅವರನ್ನು ಭೇಟಿಯಾಗಲಿದ್ದಾರೆ.
ಈ ವಿಚಾರವನ್ನು ಖುದ್ದು ಸಾವಂತ್ ಅವರೇ ತಿಳಿಸಿದ್ದು, ಗೋವಾ ಬಿಜೆಪಿ ಘಟಕದ ಅಧ್ಯಕ್ಷ ಸದಾನಂದ ತಾನಾವಡೆ ಅವರೂ ಜೊತೆಗೆ ತೆರಳಲಿದ್ದಾರೆ. ನಡ್ಡಾ ಬಳಿಕ ಅವರು ಗೃಹ ಸಚಿವ ಅಮಿತ್ ಶಾ ಅವರನ್ನೂ ಭೇಟಿಯಾಗುವ ಸಾಧ್ಯತೆಯಿದೆ. ಗೋವಾದಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಸರಕಾರ ರಚನೆ ಸಂಬಂಧ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬುಧವಾರ ನಡೆಯಲಿದ್ದು, ಈ ವೇಳೆ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ನಡೆಯಲಿದೆ ಎನ್ನಲಾಗಿದೆ. ಈ ನಡುವೆ ಹೋಳಿ ಹಬ್ಬದ ನಂತರ ಹೊಸ ಸರ್ಕಾರದ ಪ್ರಮಾಣವಚನ ನಡೆಯಲಿದೆ ಎಂದು ಸದಾನಂದ ತಾನಾವಡೆ ಸೋಮವಾರ ಹೇಳಿದ್ದರು.