ನವದೆಹಲಿ, ಮಾ 15 (DaijiworldNews/MS): ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯ ನಂತರ ಕಾಂಗ್ರೆಸ್ನಲ್ಲಿ ಆಂತರಿಕ ಕಚ್ಚಾಟ ಮುಂದುವರೆದಿದೆ. ಕಾಂಗ್ರೆಸ್ ನಾಯಕತ್ವದ ವಿರುದ್ಧ ಟೀಕೆ ಮಾಡಿದ್ದ ಹಿರಿಯ ನಾಯಕ ಕಪಿಲ್ ಸಿಬಲ್ ಅವರನ್ನು ಪಕ್ಷದ ಲೋಕಸಭಾ ಸಚೇತಕ ಮಾಣಿಕ್ಯಂ ಠಾಗೂರ್ ತರಾಟೆಗೆತ್ತಿಕೊಂಡಿದ್ದಾರೆ.
ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್ ಅವರು ಆರ್ಎಸ್ಎಸ್, ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸೋಲಿನ ಆತ್ಮವಲೋಕನಕ್ಕಾಗಿ ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯ ಬಳಿಕ ಪಕ್ಷದ ನಾಯಕತ್ವದ ಕುರಿತಾಗಿ ಕಪಿಲ್ ಸಿಬಲ್ ಅಸಮಾಧಾನ ವ್ಯಕ್ತಪಡಿಸಿದ್ದರು. ಗಾಂಧಿ ಕುಟುಂಬ ಹಿಂದಕ್ಕೆ ಸರಿದು, ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆರೆಸ್ಸೆಸ್ ಮತ್ತು ಬಿಜೆಪಿ ನೆಹರು-ಗಾಂಧಿ ನಾಯಕತ್ವವನ್ನು ಹೊರಗಿಡಲು ಬಯಸುತ್ತವೆ ಏಕೆಂದರೆ ಗಾಂಧಿಯವರ ನಾಯಕತ್ವವಿಲ್ಲದೆ ಕಾಂಗ್ರೆಸ್ ಜನತಾ ಪಕ್ಷವಾಗುತ್ತದೆ. ಕಾಂಗ್ರೆಸ್ ಅನ್ನು ನಾಶ ಮಾಡುವುದು ಸುಲಭ, ಆ ಬಳಿಕ ಭಾರತದ ಕಲ್ಪನೆಯನ್ನು ನಾಶಮಾಡುವುದು ಸುಲಭ" ಎಂದು ಠಾಗೂರ್ ಟ್ವಿಟರ್ನಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ನಾಶವಾದ ಬಳಿಕ ಭಾರತದ ಜಾತ್ಯತೀತ ಚಿಂತನೆಯನ್ನು ಸಾಯಿಸುವುದು ಸುಲಭವಾಗಲಿದೆ. ಇದು ಕಪಿಲ್ ಸಿಬಲ್ ಅವರಿಗೆ ಗೊತ್ತಿದೆ. ಹಾಗಿದ್ದು ಅವರೇಕೆ ಆರ್ಎಸ್ಎಸ್, ಬಿಜೆಪಿ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ? ಎಂದು ಠಾಗೂರ್ ಪ್ರಶ್ನಿಸಿದ್ದಾರೆ.