ಬೆಂಗಳೂರು, ಮಾ 15 (DaijiworldNews/MS): ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು ಆದರೆ ಶಿಕ್ಷಣ, ಕಾನೂನು ಸುವ್ಯವಸ್ಥೆ ಹಾಗೂ ಕೋಮುಸೌಹಾರ್ದತೆಯ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿದ ಸರ್ಕಾರದ ಆದೇಶ ಪ್ರಶ್ನಿಸಿ ಮುಸ್ಲಿಮ್ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿಗಳನ್ನು ಮಂಗಳವಾರ ವಜಾ ಮಾಡಿರುವ ಹೈಕೋರ್ಟ್, ಸರ್ಕಾರದ ಆದೇಶ ಕಾನೂನುಬದ್ಧವಾಗಿದೆ. ಸರ್ಕಾರದ ವಸ್ತ್ರಸಂಹಿತೆಯನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಸಮವಸ್ತ್ರವನ್ನು ಕಡ್ಡಾಯ ಮಾಡುವುದು ಸಂವಿಧಾನದ 19 (1) (ಎ) ಮತ್ತು 25 ರ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ ಎಂದು ತ್ರಿಸದಸ್ಯ ಪೀಠ ಮಂಗಳವಾರ ಮಹತ್ವದ ತೀರ್ಪು ನೀಡಿತ್ತು.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಡಿಕೆಶಿ, "ಹಿಜಾಬ್ ವಿವಾದದಲ್ಲಿ ನನ್ನ ದೊಡ್ಡ ಆತಂಕವಿರುವುದು ಶಿಕ್ಷಣ ಮತ್ತು ಕಾನೂನು ಮತ್ತು ಸುವ್ಯವಸ್ಥೆ ವಿಚಾರದಲ್ಲಿ. ಹಿಜಾಬ್ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಆದರೆ ಶಿಕ್ಷಣ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಕೋಮು ಸೌಹಾರ್ದತೆಯ ಜವಾಬ್ದಾರಿ ಕರ್ನಾಟಕ ಸರ್ಕಾರದ ಮೇಲಿದೆ.
ನಾಯಕತ್ವದಲ್ಲಿ ಪ್ರಬುದ್ಧತೆಯನ್ನು ತೋರುವಂತೆ ನಾನು ಕರ್ನಾಟಕ ಸರ್ಕಾರವನ್ನು ನಾನು ಕೇಳಿಕೊಳ್ಳುತ್ತೇನೆ. ಜೊತೆಗೆ,ಶಾಲಾಕಾಲೇಜುಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಂತೆ, ಶಿಕ್ಷಣದಲ್ಲಿ ಧರ್ಮ ಹಾಗೂ ಲಿಂಗ ತಾರತಮ್ಯವಾಗದಂತೆ, ಕೋಮುಸೌಹಾರ್ದತೆಯನ್ನು ಕಾಪಾಡುವಂತೆ ವಿನಂತಿಸಿಕೊಳ್ಳುತ್ತೇನೆ" ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.