ಬೆಂಗಳೂರು, ಮಾ 15 (DaijiworldNews/HR): ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು, ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ ಅಲ್ಲ, ಎನ್ನುವ ಕೋರ್ಟ್ ತೀರ್ಪಿಗೆ ಸಹಮತ ಹಾಗೂ ವಿರೋಧ ವ್ಯಕ್ತವಾಗುತ್ತಿದ್ದು, ಬಿಜೆಪಿ ನಾಯಕರು ತೀರ್ಪಿಗೆ ಗೌರವ ನೀಡಿದ್ದಾರೆ.
ಈ ಕುರಿತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಕ್ರಿಯಿಸಿ, ಹೈಕೋರ್ಟ್ ನೀಡಿರುವಂತ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಸಂವಿಧಾನಕ್ಕಿಂತ ಧರ್ಮ ದೊಡ್ಡದಲ್ಲ. ಸಂವಿಧಾನವನ್ನು ಗೌರವಿಸುವವರು ತೀರ್ಪು ಗೌರವಿಸಬೇಕು. ರಾಜ್ಯ ಸರ್ಕಾರದ ಸಮವಸ್ತ್ರ ನೀತಿಯನ್ನು ಕೋರ್ಟ್ ಎತ್ತಿ ಹಿಡಿದಿದೆ. ಸಂವಿಧಾನವನ್ನು ಗೌರವಿಸುವವರು, ಇಂದಿನ ಹೈಕೋರ್ಟ್ ತೀರ್ಪನ್ನು ಗೌರವಿಸಬೇಕು. ಹಿಜಾಬ್ ವಿವಾದವನ್ನು ಇಲ್ಲಿಗೆ ಬಿಡಬೇಕು ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಮಾತನಾಡಿ, ವಿದ್ಯಾರ್ಥಿಗಳು ಆಯಾ ಶಾಲಾ ಕಾಲೇಜುಗಳು ಸೂಚಿಸುವ ಸಮವಸ್ತ್ರ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಹೈಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಯಾವುದೇ ಧರ್ಮದ ಮಕ್ಕಳಾದರೂ ಶಿಕ್ಷಣಕ್ಕೆ ಆದ್ಯ ಗಮನ ಕೊಟ್ಟು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಯಾವುದೇ ಧಾರ್ಮಿಕ ವಸ್ತ್ರಗಳತ್ತ ಅನಗತ್ಯ ಆದ್ಯತೆ ನೀಡುವ ಮೂಲಕ ಬದುಕಿನ ಸದವಕಾಶಗಳನ್ನು ವ್ಯರ್ಥ ಮಾಡಿಕೊಳ್ಳಬಾರದು. ಈ ಮೂಲಕ ಎಲ್ಲರೂ ಸೌಹಾರ್ದದಿಂದ ಮತ್ತು ಪರಸ್ಪರ ಗೌರವದಿಂದ ಬದುಕಬೇಕು ಎಂದಿದ್ದಾರೆ.
ಸಚಿವ ಸುಧಾಕರ್ ಟ್ವೀಟ್ ಮಾಡಿ, ರಾಜ್ಯ ಸರ್ಕಾರದ ಸಮವಸ್ತ್ರ ಆದೇಶವನ್ನು ಎತ್ತಿ ಹಿಡಿದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರದ ಪಾವಿತ್ರ್ಯತೆಯನ್ನು ಎತ್ತಿ ಹಿಡಿಯುವ ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ ಎಂದರು.
ಇನ್ನು ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿ, ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ನೀಡಿರುವ ತೀರ್ಪು ಸ್ವಾಗಾತಾರ್ಹ. ಈ ತೀರ್ಪಿನಿಂದಾಗಿ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿದ್ದು, ಹೆಣ್ಣು ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.