ನವದೆಹಲಿ, ಮಾ 15 (DaijiworldNews/DB): ಕುಟುಂಬ ರಾಜಕಾರಣಕ್ಕೆ ಭಾರತೀಯ ಜನತಾ ಪಕ್ಷದಲ್ಲಿ ಅವಕಾಶ ನೀಡುವುದಿಲ್ಲ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 15ರ ಮಂಗಳವಾರ ನಡೆದ ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಸ್ಪಷ್ಟ ಸಂದೇಶ ನೀಡಿದ್ದಾರೆ.
ಬಿಜೆಪಿಯೇತರ ಪಕ್ಷಗಳಲ್ಲಿ ವಂಶಾಡಳಿತ ರಾಜಕಾರಣ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಡಬೇಕಿದೆ. ಬಿಜೆಪಿಯಲ್ಲಿ ವಂಶಾಡಳಿತ ರಾಜಕಾರಣಕ್ಕೆ ಯಾವತ್ತೂ ಅವಕಾಶ ನೀಡುವುದಿಲ್ಲ. ವಂಶಾಡಳಿತ ರಾಜಕಾರಣದಡಿ ಮಕ್ಕಳಿಗೆ ಟಿಕೆಟ್ ಬಯಸಿ ಬಂದ ಯಾರಿಗೇ ಆದರೂ ಟಿಕೆಟ್ ನಿರಾಕರಿಸಿದರೆ ಅದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಮೋದಿ ಹೇಳಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ.
ಬಿಜೆಪಿಯೇತರ ಮುಖ್ಯಮಂತ್ರಿಗಳು ಉಕ್ರೇನ್ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. ಆದರೆ 'ಆಪರೇಷನ್ ಗಂಗಾ’ ಕಾರ್ಯಾಚರಣೆಯಡಿ ಭಾರತದ ಪ್ರಜೆಗಳನ್ನುಕೇಂದ್ರ ಸರಕಾರ ಸುರಕ್ಷಿತವಾಗಿ ಸ್ಥಳಾಂತರಿಸಿದೆ. ಪ್ರತಿಪ್ರಕ್ಷಗಳು ಮಾಡುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದೂ ಮೋದಿ ಹೇಳಿದ್ದಾರೆ.
ಬಿಜೆಪಿ ಸಂಸದ ಮನೋಜ್ ತಿವಾರಿ ಮಾಹಿತಿಯಂತೆ, 'ಕಾಶ್ಮೀರ ಫೈಲ್ಸ್' ಸಿನಿಮಾವು ಹಲವು ಸತ್ಯಗಳನ್ನು ಹೊರ ಹಾಕಿದೆ. ಆದರೆ ಕೆಲ ಗುಂಪುಗಳು ಈಗಲೂ ಸತ್ಯವನ್ನು ಸಮಾಧಿ ಮಾಡಲು ಹೊರಟಿವೆ. ಅಂತಹ ಸತ್ಯಗಳನ್ನು ನಾವು ದೇಶದ ಜನರ ಮುಂದಿಡಬೇಕೆಂದು ಎಂದು ಮೋದಿ ಸೂಚಿಸಿದ್ದಾರೆ.
ಪಂಚರಾಜ್ಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಕಳಪೆ ಸಾಧನೆ ತೋರಿರುವ ಕ್ಷೇತ್ರಗಳ ಬಗ್ಗೆ ಪರಿಶೀಲನೆ ನಡೆಸಿ ಕಾರಣ ತಿಳಿದುಕೊಳ್ಳಬೇಕು ಎಂದು ಇದೇ ವೇಳೆ ಸಂಸದರಿಗೆ ಪ್ರಧಾನಿಯವರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.