ಬೆಂಗಳೂರು,ಮಾ 15 (DaijiworldNews/MS): ಹೈಕೋರ್ಟ್ ತೀರ್ಪನ್ನು ಎಲ್ಲರೂ ಪಾಲಿಸಬೇಕು, ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆ ಅಲ್ಲ, ಎನ್ನುವ ಕೋರ್ಟ್ ತೀರ್ಪಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ರಾಜ್ಯಾದ್ಯಾಂತ ಭಾರೀ ವಿವಾದಕ್ಕೆ ಕಾರಣವಾಗಿದ್ದ ಹಿಜಾಬ್ ಪ್ರಕರಣದ ತೀರ್ಪಿನ ಹಿನ್ನಲೆಯಲ್ಲಿ, ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಖಾದರ್, ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರಿಂ ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ. ಹೀಗಾಗಿ ಸಂಬಂಧಪಟ್ಟವರು ಸಲ್ಲಿಸಬಹುದು. ಶಾಲಾ ಆಡಳಿತ ಮಂಡಳಿ ತೀರ್ಮಾನದಂತೆ ಸಮವಸ್ತ್ರ ನಿರ್ಧಾರ ಆಗುತ್ತೆ, ಸಿಡಿಸಿ ತೀರ್ಮಾನ ಇಲ್ಲದ ಕಡೆ ಸಮವಸ್ತ್ರ ಇಲ್ಲದಿರಬಹುದು. ಆದರೆ ಹಿಜಾಬ್ ಧಾರಣೆ ಇಸ್ಲಾಂನ ಅತ್ಯಗತ್ಯ ಆಚರಣೆ ಅಲ್ಲ, ಎನ್ನುವ ಕೋರ್ಟ್ ತೀರ್ಪಿಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದ್ದಾರೆ.
ಹೈಕೋರ್ಟ್ ತೀರ್ಪು ವಿರುದ್ದ ಅಸಮಧಾನ ವ್ಯಕ್ತಪಡಿಸಿದ ಸಿ.ಎಂ.ಇಬ್ರಾಹಿಂ :
ಹಿಜಾಬ್ ವಿವಾದ ಕುರಿತು ಹೈಕೋರ್ಟ್ ನೀಡಿರುವ ತೀರ್ಪು ಸಮಾಧಾನಕರವಾಗಿಲ್ಲ. ಕೋರ್ಟ್ ತೀರ್ಪನ್ನು ಧರ್ಮದ ದೃಷ್ಟಿಯಿಂದ ನೋಡಬಾರದು ಸಂವಿಧಾನದ ದೃಷ್ಟಿಯಿಂದ ನೋಡಬೇಕು. ಮೂಲಭೂತವಾಗಿ ಧರ್ಮಕ್ಕೆ ಅಡಚಣೆಯಿಲ್ಲ ಎಂದು ಹೇಳಲಾಗಿದೆ. ಸರ್ಕಾರ ಮಾತುಕತೆಯ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದಿದ್ದಾರೆ
ತಿಲಕ, ವಿಭೂತಿ ಅಲಂಕಾರಿಕ ವಸ್ತುವಲ್ಲ, ಭಕ್ತಿಯ ಸಂಕೇತ. ನಾಳೆ ಬೇರೆ ಉಡುಪಿನ ಬಗ್ಗೆಯೂ ಚರ್ಚೆಯಾಗಬಹುದು. ಹಿಜಾಬ್ ಕುರಿತ ವಿಚಾರವನ್ನು ನಮ್ಮ ಸಮಾಜದ ಮುಖಂಡರು ತೀರ್ಮಾನಿಸುತ್ತಾರೆ ಎಂದು ಹೇಳಿದ್ದಾರೆ.