ಹೊಸದೆಹಲಿ, ಮಾ 15 (DaijiworldNews/DB): ಪಾಕಿಸ್ತಾನ ಪ್ರದೇಶದಲ್ಲಿ ಭಾರತದ ಕ್ಷಿಪಣಿ ಇಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖಿಗೆ ಆದೇಶಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಸಂಸತ್ತಿನಲ್ಲಿ ಮಂಗಳವಾರ ಮಾತನಾಡಿದ ಅವರು, ನಿತ್ಯದ ನಿರ್ವಹಣೆ ಮತ್ತು ಪರಿಶೀಲನೆ ಸಂದರ್ಭದಲ್ಲಿ ಮಾರ್ಚ್ 9ರಂದು ಸಂಜೆ 7ರ ಆಸುಪಾಸಿನಲ್ಲಿ ಘಟನೆ ನಡೆದಿದೆ. ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ಬಳಿಕ ಘಟನೆಗೆ ಕಾರಣ ಗೊತ್ತಾಗಲಿದೆ ಎಂದರು.
ಭಾರತದ ಆಯುಧಗಳ ರಕ್ಷಣೆ ಮತ್ತು ಭದ್ರತೆ ಸಂಬಂಧಿಸಿ ಸರಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಕ್ಷಿಪಣಿಯು ಅತ್ಯಂತ ವಿಶ್ವಾಸಾರ್ಹ ಮತ್ತು ಭದ್ರತೆಯಿಂದ ಕೂಡಿದೆ. ಮುಂದೆ ಇಂತಹ ಘಟನೆ ಮರುಕಳಿಸಬಾರದೆಂಬ ನಿಟ್ಟಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗುಗೊಳಿಸಲಾಗುವುದು ಎಂದವರು ಪ್ರತಿಕ್ರಿಯಿಸಿದರು.