ಬೆಂಗಳೂರು, ಮಾ 15 (DaijiworldNews/HR): ಹಿಜಾಬ್ ವಿವಾದದಿಂದ ರಾಜ್ಯದಲ್ಲಿ ಶೈಕ್ಷಣಿಕ ಮತ್ತು ಬಂಡವಾಳ ಹೂಡಿಕೆಗೆ ಹಿನ್ನಡೆ ಆಗಿದೆ ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಯು.ಟಿ.ಖಾದರ್ ಅವರು ಹೇಳಿದ್ದು, ಈ ಹೇಳಿಕೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಖಾದರ್, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಸಮಾವೇಶಗಳನ್ನು ಮಾಡುವ ಬದಲು, ಸಾಮರಸ್ಯ ಸಮಾವೇಶಗಳನ್ನು ನಡೆಸಬೇಕು. ಸಮವಸ್ತ್ರ, ಹಿಜಾಬ್ ವಿಚಾರದಲ್ಲಿ ನಡೆದ ಘಟನಾವಳಿಯಿಂದ ರಾಜ್ಯಕ್ಕೆ ಕಳಂಕ ಬಂದಿದ್ದು, ಈ ವಿಚಾರ ನ್ಯಾಯಾಲಯಕ್ಕೆ ಹೋಗಲು ಬಿಡದೇ ಸರ್ಕಾರವೇ ಬಗೆಹರಿಸಬೇಕಿತ್ತು. ಆದರೆ ಸರ್ಕಾರ ಅದನ್ನು ಮಾಡಿಲ್ಲ ಹಾಗಾಗಿ ರಾಜ್ಯಕ್ಕೆ ನಷ್ಟವಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಈ ಘಟನೆಗಳಿಗೆ ಕಾರಣರು ಯಾರು? ನ್ಯಾಯಾಲಯಕ್ಕೆ ಹೋಗಿ ಎಂದು ನಾವೇನೂ ಹೇಳಿಲ್ಲ. ಅವರಾಗಿಯೇ ಹೋಗಿದ್ದಾರೆ. ಕಾನೂನು ಸುವ್ಯವಸ್ಥೆ ಸರಿಯೇ ಇದೆ. ಸಮಸ್ಯೆಗಳ ಸೃಷ್ಟಿಗೆ ಮೂಲ ಕಾರಣರು ಯಾರು ಹೇಳಿ. ನೀವೇ ಕಾರಣರು, ಅರಾಜಕತೆಯನ್ನು ನೀವೇ ಸೃಷ್ಟಿಸಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಸರ್ಕಾರ ಮೇಲೆ ಆರೋಪ ಮಾಡುತ್ತಿದ್ದಾಗ ಸುಮ್ಮನೇ ಇದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಮೇಲೂ ಕೋಪಗೊಂಡ ಮಾಧುಸ್ವಾಮಿ, ಏನ್ರಿ ಇಷ್ಟೇ ಹೇಳುತ್ತಿದ್ದರೂ ಸುಮ್ಮನೇ ಇದ್ದೀರಲ್ಲ, ಗೃಹ ಸಚಿವರೇ ಎಂದರು.