ಬೆಂಗಳೂರು, ಮಾ 15 (DaijiworldNews/MS): ಉಡುಪಿ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಿಡಿಯಾಗಿ ಪ್ರಾರಂಭವಾಗಿ ಇಡೀ ದೇಶದಲ್ಲಿ ಸಂಘರ್ಷಕ್ಕೆ ಎಡೆ ಮಾಡಿದ್ದ 'ಹಿಜಾಬ್ ವಿವಾದ’ದ ಕುರಿತ ಮಹತ್ವದ ತೀರ್ಪು ಹೊರಬಿದ್ದಿದ್ದು, "ಸರ್ಕಾರದ ಆದೇಶ ಕಾನೂನು ಬದ್ದವಾಗಿದೆ. ಸರ್ಕಾರ ಹೊರಡಿಸಿದ ವಸ್ತ್ರಸಂಹಿತೆ್ ಆದೇಶವನ್ನು ಪ್ರಶ್ನಿಸುವಂತಿಲ್ಲ. ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಸರ್ಕಾರ ಆದೇಶ ಕಾನೂನು ಬದ್ದವಾಗಿದೆ. ಹಿಜಾಬ್ ಧರಿಸುವಂತೆ ಕೋರಿ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ವಜಾಗೊಳಿಸಿ ಶಾಲಾ ಕಾಲೇಜುಗಳಲ್ಲಿ ಸಮವಸ್ತ್ರ ಧಾರಣೆ ಕಡ್ಡಾಯ" ಎನ್ನುವ ಹೈಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರನ್ನು ಒಳಗೊಂಡ ಪೀಠವು ತೀರ್ಪು ಪ್ರಕಟಿಸಿದೆ. 11 ದಿನ ಸುದೀರ್ಘ ವಿಚಾರಣೆ ನಡೆಸಿದ್ದ ಪೂರ್ಣ ಪೀಠವು ಫೆಬ್ರವರಿ 25ರಂದು ತೀರ್ಪು ಕಾಯ್ದಿರಿಸಿತ್ತು. ಸರಿ ಸುಮಾರು 23.5 ತಾಸು ವಿಚಾರಣೆ ಆಲಿಸಿರುವ ಪೀಠವು 17 ದಿನಗಳ ಬಳಿಕ ತೀರ್ಪು ಪ್ರಕಟಿಸಿದೆ.
ಹೈಕೋರ್ಟ್ ಮುಂದಿರಿಸಿದ್ದ ಪ್ರಶ್ನೆ ಮತ್ತು ಉತ್ತರ :
1. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯೇ?
ಉ: ಮುಸ್ಲಿಮ್ ಮಹಿಳೆಯರು ಹಿಬಾಜ್ ಧರಿಸುವುದು ಇಸ್ಲಾಮ್ನಲ್ಲಿ ಅಗತ್ಯ ಧಾರ್ಮಿಕ ಆಚರಣೆಯಲ್ಲ.
2. ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆಯೇ? ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಖಾಸಗಿ ಹಕ್ಕಿನ ಭಾಗವೇ?
ಉ:ಶಾಲೆಯಲ್ಲಿ ಸಮವಸ್ತ್ರ ಸೂಚಿಸಿರುವುದು ಒಂದು ಸಮಂಜಸವಾದ ನಿರ್ಬಂಧವಾಗಿದ್ದು, ವಿದ್ಯಾರ್ಥಿಗಳು ಅದನ್ನು ಆಕ್ಷೇಪಿಸುವಂತಿಲ್ಲ.
3. ರಾಜ್ಯ ಸರ್ಕಾರದ ಆದೇಶವು ವಿವೇಚನಾರಹಿತವಾಗಿದೆಯೇ?
ಉ: ಆದೇಶ ಮಾಡಲು ಸರ್ಕಾರಕ್ಕೆ ಅಧಿಕಾರವಿದೆ.
ಏನಿದು ಹಿಜಾಬ್ ವಿವಾದ?
ಉಡುಪಿ ಮಹಿಳಾ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳು ವಾರಗಟ್ಟಲೆ ಪ್ರತಿಭಟನೆ ನಡೆಸುವ ಮೂಲಕ ಈ ವಿವಾದ ಆರಂಭವಾಗಿತ್ತು. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರಿಗೂ ಹೀಗೆ ಹಲವು ಕಾಲೇಜಿಗೀ ಹರಡಿ ಶಿವಮೊಗ್ಗ , ಕಲಬುರ್ಗಿ ಹೀಗೆ ಹಲವು ಜಿಲ್ಲೆಗಳ ವ್ಯಾಪಿಸಿ ಕರ್ನಾಟಕದಲ್ಲಿ ಮಾತ್ರವಲ್ಲದೆ ರಾಷ್ಟ್ರ, ಅಂತಾರಾಷ್ಟ್ರಿಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಈ ನಡುವೆ ಹಿಜಾಬ್ ಹಿಂದು ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದು ಇಡೀ ಪ್ರಕರಣ ಕೋಮು ಸಂಘರ್ಷದತ್ತ ತಿರುಗಿತ್ತು.
ಹಿಜಾಬ್ – ಕೇಸರಿ ಸಂಘರ್ಷಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ, " ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಕಲಂ 133ರ ಅನ್ವಯ ರಾಜ್ಯ ಸರ್ಕಾರದ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಸರ್ಕಾರ ನಿಗದಿ ಮಾಡಿರುವ ಸಮವಸ್ತ್ರವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಧರಿಸಬೇಕು. ಸ್ಕಾರ್ಫ್ ಧರಿಸಿದವರಿಗೆ ಶಾಲೆಗೆ ಬರದಂತೆ ನಿರ್ದೇಶಿಸಬಹುದು , ಖಾಸಗಿ ಶಾಲೆ-ಕಾಲೇಜುಗಳಲ್ಲಿ ಆಡಳಿತ ಮಂಡಳಿ ನಿರ್ದೇಶಿಸಿದ ಸಮವಸ್ತ್ರ ಕಡ್ಡಾಯ. ಆಡಳಿತ ಮಂಡಳಿ ಸಮವಸ್ತ್ರ ನಿಗದಿಪಡಿಸದಿದ್ದಲ್ಲಿ ಸಮಾನತೆ ಐಕ್ಯತೆ ಕಾಪಾಡಿಕೊಂಡು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಬರದಂತೆ ಇರುವ ಉಡುಪು ಧರಿಸಬೇಕು ಎಂದು ನಿರ್ದೇಶಿಸಿತ್ತು.
ಸರ್ಕಾರದ ನಿರ್ದೇಶನವನ್ನು ಪ್ರಶ್ನಿಸಿ ಹಾಗೂ ಧಾರ್ಮಿಕ ನಂಬಿಕೆಯ ಭಾಗವಾದ ಹಿಜಾಬ್ ಧರಿಸಲು ಮತ್ತು ಕಾಲೇಜಿಗೆ ಪ್ರವೇಶಿಸಲು ಅವಕಾಶ ಮಾಡುವಂತೆ ಕಾಲೇಜಿಗೆ ಆದೇಶ ಮಾಡಬೇಕು. ಸಂವಿಧಾನದ 14 ಮತ್ತು 25ನೇ ವಿಧಿಯಡಿ ಇಸ್ಲಾಂ ಧರ್ಮದಲ್ಲಿ ಹಿಜಾಬ್ ಧರಿಸುವುದು ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು ಹಿಜಾಬ್ ವಿವಾದ ಬಿಜೆಪಿ ಬೆಂಬಲಿಸುವ ಬಲಪಂಥಿಯ ಸಂಘಟನೆಗಳು ಮತ್ತು ಮುಖಂಡರು ಹಿಜಾಬ್ ನಿಷೇಧವಾಗಬೇಕು ಎಂಬ ಒತ್ತಾಯಿಸಿದ್ದಾರೆ, , ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಮತ್ತು ಎಡ ಪಂಥೀಯ ನಾಯಕರು ಹಿಜಾಬ್ಗೆ ಅವಕಾಶ ಬೇಕು ಎಂದು ಆಗ್ರಹಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿ ದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹಿಜಾಬ್ ಪ್ರಕರಣ ಹೈಕೋರ್ಟ್ ಏಕಸದಸ್ಯ ಪೀಠದಿಂದ ಮುಖ್ಯ ನ್ಯಾಯಮೂರ್ತಿಗಳಿಗೆ ವರ್ಗಾವಣೆ ಮಾಡಿದ್ದರು. ಆ ಬಳಿಕ ತ್ರಿ ಸದಸ್ಯ ಪೀಠ ಮಧ್ಯಂತರ ಆದೇಶ ಪ್ರಕಟಿಸಿತ್ತು.
ಮಧ್ಯಂತರ ಆದೇಶದಲ್ಲಿ ಏನಿತ್ತು?
ಹಿಜಾಬ್ ವಿವಾದ ಪ್ರಕರಣದಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ಆರಂಭಿಸಿದ್ದ ಮೂವರು ಸದಸ್ಯರ ವಿಸ್ತೃತ ಪೀಠ, ವಿ ವಿದ್ಯಾರ್ಥಿಗಳು ಸಮವಸ್ತ್ರದ ಹೊರತಾದ ಧಾರ್ಮಿಕ ಗುರುತು ಪ್ರದರ್ಶಿಸುವ ಉಡುಪು ಧರಿಸಿ ತರಗತಿಗೆ ಹೋಗುವಂತಿಲ್ಲ ಎಂದು ಮಧ್ಯಂತರ ಆದೇಶ ನೀಡಿತ್ತು.