ಬೆಂಗಳೂರು, ಮಾ 15 (DaijiworldNews/DB): ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಮತ್ತು ಸಾಂಸ್ಥಿಕ ಚುನಾವಣೆ ನಡೆಸುವ ಸಂಬಂಧ ಸೋಮವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಬಿಜೆಪಿ ಮತ್ತು ಅದರ ಸಿದ್ಧಾಂತದ ವಿರುದ್ಧ ನಾವು ಹೋರಾಡುತ್ತೇವೆ. ಈ ನಿಟ್ಟಿನಲ್ಲಿ ಪಕ್ಷವನ್ನು ತಳಮಟ್ಟದಿಂದಲೇ ಬಲಪಡಿಸುವ ಅಗತ್ಯವಿದೆ. ಅದಕ್ಕಾಗಿ ಈಗಿಂದಲೇ ಕೆಲಸ ಮಾಡಲು ಪಕ್ಷ ಮುಂದಾಗಿದೆ ಎಂದು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ಆಗಸ್ಟ್ ನಲ್ಲಿ ಸಾಂಸ್ಥಿಕ ಚುನಾವಣೆ ನಡೆಯಲಿದೆ. ಅದಕ್ಕೂ ಮುನ್ನ ರಾಜ್ಯದಲ್ಲಿ ಪಕ್ಷ ಬಲಪಡಿಸುವಿಕೆಗೆ ಕಾರ್ಯತಂತ್ರಗಳನ್ನು ರೂಪಿಸಿ ಅದರಂತೆ ಕಾರ್ಯನಿರ್ವಹಿಸಲಾಗುವುದು. ಕೇಂದ್ರ ನಾಯಕರ ನಿರ್ಧಾರಗಳನ್ನು ಕೆಪಿಸಿಸಿ, ತಾಲೂಕು ಮತ್ತು ಬ್ಲಾಕ್ ಮಟ್ಟದ ಘಟಕಗಳು ಕಾರ್ಯಗತಗೊಳಿಸುವ ನಿರೀಕ್ಷೆಯಿದೆ ಎಂದರು.
ಪದಾಧಿಕಾರಿಗಳು ಮತ್ತು ಸಾಂಸ್ಥಿಕ ಸ್ಥಾನಗಳ ನಿರೀಕ್ಷಿತರ ಪಟ್ಟಿಯೊಂದಿಗೆ ಡಿ.ಕೆ. ಶಿವಕುಮಾರ್ ಈಗಾಗಲೇ ದೆಹಲಿಗೆ ತೆರಳಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆಯಿದೆ.