ಕೋಲ್ಕತ್ತಾ, ಮಾ 15 (DaijiworldNews/MS): ಮದರ್ ತೆರೇಸಾ ಅವರಿಂದ ಸ್ಥಾಪಿಸಲ್ಪಟ್ಟಿರುವ ಮಿಷನರೀಸ್ ಆಫ್ ಚಾರಿಟಿಯ ಸುಪೀರಿಯರ್ ಜನರಲ್ ಆಗಿ ಕೇರಳ ಮೂಲದ 71 ವರ್ಷ ಸಿಸ್ಟರ್ ಮೇರಿ ಜೋಸೆಫ್ ಆಯ್ಕೆಯಾಗಿದ್ದಾರೆ. ಕೋಲ್ಕತ್ತಾದಲ್ಲಿ ಸೇಂಟ್ ತೆರೇಸಾ ಅವರು ಸ್ಥಾಪಿಸಿದ ಜಾಗತಿಕ ಸಂಸ್ಥೆಯ ಉನ್ನತ ಹುದ್ದೆಯ ನಾಲ್ಕನೇ ಸುಪೀರಿಯರ್ ಜನರಲ್ ಆಗಿ ಸಿಸ್ಟರ್ ಮೇರಿ ಜೋಸೆಫ್ ಇನ್ನು ಮುಂದೆ ಕಾರ್ಯನಿರ್ವಹಿಸಲಿದ್ದಾರೆ.
13 ವರ್ಷಗಳ ಕಾಲ ಮಿಷನರೀಸ್ ಆಫ್ ಚಾರಿಟಿಯ ಸುಪೀರಿಯರ್ ಜನರಲ್ ಆಗಿದ್ದ ಜರ್ಮನಿಯಲ್ಲಿ ಜನಿಸಿದ್ದ ಸಿಸ್ಟರ್ ಮೇರಿ ಪ್ರೇಮಾ ಅವರು ಇತ್ತೀಚೆಗೆ ತಮ್ಮ ಆರೋಗ್ಯ ಸಮಸ್ಯೆಯಿಂದಾಗಿ ಹುದ್ದೆಯಿಂದ ಕೆಳಗಿಳಿಯಲು ಬಯಸಿದ್ದರು.
ಕೇರಳದ ತ್ರಿಶ್ಶೂರು ಜಿಲ್ಲೆಯ ಮಾಲ ಎಂಬ ಊರಿನವರಾಗಿರುವ ಸಿಸ್ಟರ್ ಮೇರಿ ಜೋಸೆಫ್ ಪ್ರಸ್ತುತ ಈ ಚಾರಿಟಿಯ ದಕ್ಷಿಣ ವಲಯದ ಪ್ರಾದೇಶಿಕ ಸುಪೀರಿಯರ್ ಆಗಿ ಸೇವೆಯಲ್ಲಿದ್ದಾರೆ.
ಕಳೆದ ದಿನ ಕೋಲ್ಕತ್ತಾದಲ್ಲಿ ನಡೆದ ಚುನಾವಣೆಯಲ್ಲಿ ಸಿಸ್ಟರ್ ಮೇರಿ ಜೋಸೆಫ್ ಅವರನ್ನು ಆಯ್ಕೆ ಮಾಡಲಾಯಿತು.
ಇವರಲ್ಲದೆ, ಸಿಸ್ಟರ್ಸ್ ಕ್ರಿಸ್ಟಿ ಸಹಾಯಕ ಜನರಲ್ ಆಗಿ, ಸಿಸ್ಟರ್ ಸೆಸಿಲ್ ಎರಡನೇ ಕೌನ್ಸಿಲರ್ ಆಗಿ, ಸಿಸ್ಟರ್ ಮೇರಿ ಜುವಾನ್ ಮೂರನೇ ಕೌನ್ಸಿಲರ್ ಮತ್ತು ಸಿಸ್ಟರ್ ಪ್ಯಾಟ್ರಿಕ್ ನಾಲ್ಕನೇ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದಾರೆ.
ಸಿಸ್ಟರ್ ನಿರ್ಮಲಾ ಅವರು ಮದರ್ ತೆರೇಸಾ ಅವರ ಮರಣದ ನಂತರ ಮಿಷನರೀಸ್ ಆಫ್ ಚಾರಿಟಿಯ ಮುಖ್ಯಸ್ಥರಾಗಿ ಉತ್ತರಾಧಿಕಾರಿಯಾದರು ಮತ್ತು ಅನಾರೋಗ್ಯ ಕಾರಣಗಳಿಗಾಗಿ 2009 ರಲ್ಲಿ ಹುದ್ದೆ ತ್ಯಜಿಸಿದ್ದರು.