ಬೆಂಗಳೂರು, ಮಾ. 14 (DaijiworldNews/SM): ಕರಾವಳಿಯಿಂದ ಆರಂಭಗೊಂಡು ರಾಜ್ಯದೆಲ್ಲೆಡೆ ವ್ಯಾಪಿಸಿಕೊಂಡು ಭಾರೀ ವಿವಾದ ಸೃಷ್ಠಿಸಿದ್ದ ಹಿಜಾಬ್ ವಿವಾದದ ಕುರಿತಂತೆ ಮಾರ್ಚ್ 14ರ ಮಂಗಳವಾರದಂದು ಹೈಕೋರ್ಟ್ ತೀರ್ಪು ಪ್ರಕಟಗೊಳ್ಳಲಿದೆ. ಈ ಹಿನ್ನೆಲೆ ಸಾಕಷ್ಟು ಕುತೂಹಲ ಮೂಡಿಸಿದೆ.
ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ಹೈಕೋರ್ಟ್ ನ ತ್ರಿಸದಸ್ಯ ಪೀಠ ಸುದೀರ್ಘ ವಿಚಾರಣೆ ನಡೆಸಿದೆ. ಸರಕಾರ ಹಾಗೂ ಹಿಬಾಜ್ ಸಂಬಂಧಿಸಿದಂತೆ ಕೋರ್ಟ್ ಮೆಟ್ಟಿಲೇರಿದ್ದವರ ಪರವಾದ ವಕೀಲರಿಂದ ವಾದ ಪ್ರತಿವಾದವನ್ನು ಪೀಠ ಆಲಿಸಿದೆ. ನಾಳೆ 10.30ಕ್ಕೆ ತ್ರಿಸದಸ್ಯ ಪೀಠ ತೀರ್ಪು ನೀಡಲಿದೆ.
ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಪೂರ್ಣ ಪೀಠ ಮಂಗಳವಾರದಂದು ತೀರ್ಪು ಪ್ರಕಟಿಸಲಿದೆ.
ಸಮವಸ್ತ್ರದ ಜತೆಗೆ ಹಿಜಾಬ್ಗೆ ಅವಕಾಶ ನೀಡುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸತತ 11 ದಿನಗಳ ಕಾಲ ವಿಚಾರಣೆ ನಡೆಸಿದ್ದ ಹೈಕೋರ್ಟ್ ಇದೀಗ ಯಾವ ತೀರ್ಪು ಪ್ರಕಟಿಸುತ್ತದೆ ಎಂಬುವುದು ಕುತೂಹಲ ಮೂಡಿಸಿದೆ.