ಬೆಂಗಳೂರು, ಮಾ 14 (DaijiworldNews/MS): ರಾಜ್ಯದಲ್ಲಿರುವ ವಡ್ಡರಹಟ್ಟಿ, ಗೊಲ್ಲರಹಟ್ಟಿ, ಬೋವಿಹಟ್ಟಿ ಹೀಗೆ ಜಾತಿ ಸೂಚಕ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಶಾಸಕ ಬಸವನಗೌಡ ತುರವಿಹಾಳ್ ಕೇಳಿದಂತ ಪ್ರಶ್ನೆಗೆ ಉತ್ತರಿಸಿ ಮಾತನಾಡಿದ ಸಚಿವರು, " ರಾಜ್ಯದಲ್ಲಿಇರುವ ತಾಂಡಾಗಳು, ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸುವ ಪ್ರಸ್ತಾಪ ಇದ್ದು, ಈಗಾಗಲೇ 1441 ತಾಂಡಾ ಹಟ್ಟಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದಂತ ಕಾಂಗ್ರೆಸ್ ಸದಸ್ಯ ರಮೇಶ್ ಕುಮಾರ್, ಕೆಲವು ಕಡೆಗಳಲ್ಲಿ ವಡ್ಡರಪಾಳ್ಯ, ಮಾದಿಗರಹಳ್ಳಿ ಎಂಬಂತ ಜಾತಿ ಸೂಚಕ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ. ದಯವಿಟ್ಟು ನಿಮ್ಮ ಅಧಿಕಾರಿಗಳಿಗೆ ಈ ಹೆಸರುಗಳನ್ನು ತೆಗೆಯುವಂತೆ ಸೂಚಿಸಲು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಆರ್. ಅಶೋಕ್, "ಇನ್ನು ಮುಂದೆ ಜಾತಿ ಸೂಚಕ ಹಳ್ಳಿಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುತ್ತೇನೆ ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ನಾಯಕರ ಹಟ್ಟಿ, ಮಜರೇ ಗ್ರಾಮ, ಹಾಡಿ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಸೇರಿದಂತೆ ಇತರೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಬೇಕು. ಇದು ಬೇಗ ಮುಗಿಯುವ ಪ್ರಕ್ರಿಯೆಯಲ್ಲ. 8, 9 ತಿಂಗಳು ತಗುಲಲಿದೆ. ಆದರೆ ಜಾತಿ ಸೂಚಕ ಹೆಸರಿರುವಂತ ಗ್ರಾಮಗಳ ಹೆಸರನ್ನು ರದ್ದುಪಡಿಸಲು ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವುದಾಗಿ ತಿಳಿಸಿದ್ದಾರೆ.