ಅಲಿರಾಜ್ಪುರ, ಮಾ 14 (DaijiworldNews/MS): ಮಧ್ಯಪ್ರದೇಶದಲ್ಲಿ ನಡೆದ ಜನಪ್ರಿಯ ಬುಡಕಟ್ಟು ಉತ್ಸವದ ವೇಳೆ ಪುರುಷರ ಗುಂಪೊಂದು ಇಬ್ಬರು ಯುವತಿಯರ ಮೇಲೆ ಸಾಮೂಹಿಕ ಲೈಂಗಿಕ ದೌರ್ಜನ್ಯ ನಡೆಸುತ್ತಿರುವ ಆಘಾತಕಾರಿ ವಿಡಿಯೋ ಒಂದು ಬಹಿರಂಗವಾಗಿದೆ.
ಯುವತಿಯೊಬ್ಬಳು ವಾಹನದ ಹಿಂದೆ ಅಡಗಿಕೊಂಡಂತೆ ಕಾಣಿಸಿಕೊಳ್ಳುವುದರೊಂದಿಗೆ ವಿಡಿಯೋ ಕ್ಲಿಪ್ ಪ್ರಾರಂಭವಾಗುತ್ತದೆ,ಆ ಸ್ಥಳದ ಮೂಲಕ ಹಾದುಹೋಗುವ ವ್ಯಕ್ತಿ ಆಕೆಯ ಮೇಲೆ ದೌರ್ಜನ್ಯ ನಡೆಸುತ್ತಾನೆ. ಅಷ್ಟರಲ್ಲಿ ಮಹಿಳೆ ಮೇಲೆ ಮುಗಿಬಿದ್ದ ವ್ಯಕ್ತಿಯನ್ನು ಒರ್ವ ದಾರಿಹೋಕ ಎಳೆದು ಆಕೆಯಿಂಡ ದೂರ ತಳ್ಳುತ್ತಾನೆ. ಆದರೆ ಮಹಿಳೆಯ ಮೇಲೆ ನಡೆದ ದೌರ್ಜನ್ಯ ಇಲ್ಲಿಗೆ ಮುಗಿಯುವುದಿಲ್ಲ. ಕೆಲವು ಕ್ಷಣಗಳ ನಂತರ, ಇನ್ನೊರ್ವ ವ್ಯಕ್ತಿ ಆಕೆಯ ಮೇಲೆ ಬಲವಂತವಾಗಿ ದೌರ್ಜನ್ಯವೆಸಗಿ ಗುಂಪಿನ ಕಡೆಗೆ ಎಳೆದುಕೊಂಡು ತರುತ್ತಾನೆ. ಇಲ್ಲಿ ಗುಂಪಿನ ಜನರು ಆಕೆಯ ಮೇಲೆ ಮುಗಿಬೀಳಲು ಯತ್ನಿಸುತ್ತಾರೆ.
ಅದೇ ವಿಡಿಯೋ ಪ್ರೇಮ್ ನಲ್ಲಿ , ಮತ್ತೋರ್ವ ಮಹಿಳೆಯ ಮೇಲೆ ದೌರ್ಜನ್ಯ ನಡೆಸಿರುವುದು ಕಾಣಬಹುದಾಗಿದೆ.
ಅಲ್ಲಿದ್ದ ಹಲವು ಯುವಕರು ತಮ್ಮ ಫೋನ್ನಲ್ಲಿ ಘಟನೆಯನ್ನು ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿರೂ, ಯಾರೊಬ್ಬರೂ ಯುವತಿಯರ ರಕ್ಷಣೆಗೆ ಧಾವಿಸಿ ಬರಲಿಲ್ಲ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಲಿರಾಜ್ಪುರದ ಪೊಲೀಸ್ ಅಧೀಕ್ಷಕ ಮನೋಜ್ ಕುಮಾರ್ ಸಿಂಗ್ " ನಿನ್ನೆ ವೀಡಿಯೊದ ಬಗ್ಗೆ ನಮಗೆ ತಿಳಿದು ಬಂದಿತು. ಘಟನೆಯ ಕುರಿತು ಸುಮೊಟೋ ಕೇಸು ದಾಖಲಿಸಿದ್ದೇವೆ. ಎಫ್ಐಆರ್ ದಾಖಲಿಸಿದ ನಂತರ ಇಬ್ಬರು ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಆದರೆ ಪ್ರಮುಖ ಆರೋಪಿಗಳು ನಾಪತ್ತೆಯಾಗಿದ್ದಾರೆ, ಅವರೆಲ್ಲರನ್ನೂ ಗುರುತಿಸಲಾಗಿದೆ. ಆರೋಪಿಗಳ ಪತ್ತೆಗೆ ಹಲವಾರು ತಂಡಗಳನ್ನು ರಚಿಸಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.
ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಭಗೋರಿಯಾ ಅತಿ ದೊಡ್ಡ ಮತ್ತು ಪ್ರಸಿದ್ಧ ವಾರ್ಷಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಅಲಿರಾಜ್ಪುರ, ಝಬುವಾ, ಧಾರ್, ಬರ್ವಾನಿ ಮತ್ತು ಖಾರ್ಗೋನೆ ಜಿಲ್ಲೆಗಳಲ್ಲಿ ಭಗೋರಿಯಾ ಹಬ್ಬ ಶುಕ್ರವಾರ ಆರಂಭವಾಗಿದೆ.