ಚಂಡೀಗಢ, ಮಾ 14 (DaijiworldNews/MS): ಪಂಜಾಬ್ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ತಮ್ಮ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.
ಭಗವಂತ್ ಮಾನ್ ಅವರು ಸಂಗ್ರೂರ್ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ನಡೆದ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮಾನ್ ಧುರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ದಲ್ವಿರ್ ಸಿಂಗ್ ಗೋಲ್ಡಿ ಅವರ ವಿರುದ್ಧ 58,206 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
"ಇಂದು ದೆಹಲಿಗೆ ಹೋಗುತ್ತಿದ್ದೇನೆ, ನಾನು ಸಂಗ್ರೂರ್ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಂಗ್ರೂರಿನ ಜನತೆ ನನಗೆ ಕೆಲವು ವರ್ಷಗಳಿಂದ ತುಂಬಾ ಪ್ರೀತಿ ನೀಡಿದ್ದಾರೆ, ಇದಕ್ಕಾಗಿ ಧನ್ಯವಾದಗಳು. ಈಗ ನನಗೆ ಇಡೀ ಪಂಜಾಬ್ಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಇನ್ನು ಕೆಲವೇ ತಿಂಗಳಲ್ಲಿ ಸಂಗ್ರೂರಿನ ಜನತೆಯ ಧ್ವನಿ ಲೋಕಸಭೆಯಲ್ಲಿ ಮತ್ತೆ ಕೇಳಿ ಬರಲಿದೆ ಎಂದು ನಾನು ಭರವಸೆ ನೀಡುತ್ತೇನೆ ಎಂದು ಕೂನಲ್ಲಿ ಪೋಸ್ಟ್ ಮಾಡಿದ್ದಾರೆ.
48 ವರ್ಷದ ಎಎಪಿ ನಾಯಕ ಭಗವಂತ್ ಮಾನ್ ಅವರು ಮಾರ್ಚ್ 16 ರಂದು ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಎಎಪಿ 92 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸುತ್ತಿದೆ.