ನವದೆಹಲಿ, ಮಾ 14 (DaijiworldNews/MS): "ಕಾಂಗ್ರೆಸ್ ಪಕ್ಷದಲ್ಲಿ ಸುಧಾರಣೆ ಮತ್ತು ಪುನಶ್ಚೇತನದ ಅಗತ್ಯ ಇದೆ" ಎಂದು ಪಕ್ಷದ ಹಿರಿಯ ಮುಖಂಡ ಹಾಗೂ ಸಂಸದ ಶಶಿ ತರೂರ್ ಪ್ರತಿಪಾದಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಪಕ್ಷದ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಕರೆದಿದ್ದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ, ಸೋನಿಯಾ ನಾಯಕತ್ವದ ಪರ ನಿರ್ಣಯ ಕೈಗೊಂಡ ಬೆನ್ನಲ್ಲೇ, ಟ್ವಿಟರ್ನಲ್ಲಿ ತರೂರ್ ಅವರು , ಆಯಾ ಪಕ್ಷಗಳು ರಾಷ್ಟ್ರವ್ಯಾಪಿ ಹೊಂದಿರುವ ಶಾಸಕರ ಸಂಖ್ಯೆಯ ಪಟ್ಟಿಯನ್ನು ಹಂಚಿಕೊಂಡಿದ್ದು, ಕಾಂಗ್ರೆಸ್ ಪಕ್ಷದ ಸುಧಾರಣೆಯ ಬಗ್ಗೆ ಒತ್ತಿ ಹೇಳಿದ್ದಾರೆ.
ಅವರು ಹಂಚಿಕೊಂಡ ವರದಿ ಪ್ರಕಾರ, ಕಾಂಗ್ರೆಸ್ 750 ಕ್ಕೂ ಹೆಚ್ಚು ಶಾಸಕರನ್ನು ಹೊಂದಿದ್ದು, ಬಿಜೆಪಿ ದೇಶದಲ್ಲಿ 1,400 ಕ್ಕೂ ಹೆಚ್ಚು ಶಾಸಕರನ್ನು ಹೊಂದಿದೆ. ಆದರೆ ಅವರು ಹಂಚಿಕೊಂಡ ಅಂಕಿಅಂಶದ ಪಟ್ಟಿಯನ್ನು ಯಾವಾಗ ಸಂಗ್ರಹಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
" ಇದಕ್ಕಾಗಿಯೇ ಕಾಂಗ್ರೆಸ್ ಪಕ್ಷವೂ ಭಾರತದಲ್ಲಿ ರಾಷ್ಟ್ರೀಯ ವಿರೋಧ ಪಕ್ಷಗಳಲ್ಲಿ ಅತ್ಯಂತ ವಿಶ್ವಾಸಾರ್ಹವಾಗಿ ಉಳಿದಿದೆ. ಹೀಗಾಗಿ ಪಕ್ಷದ ಸುಧಾರಣೆ ಮತ್ತು ಪುನಶ್ಚೇತನಕ್ಕೆ ತೀರಾ ಅಗತ್ಯವಾಗಿದೆ" ಎಂದು ಪ್ರತಿಪಾದಿಸಿದ್ದಾರೆ.