ನವದೆಹಲಿ, ಮಾ 14 (DaijiworldNews/MS): ಉತ್ತರಪ್ರದೇಶ ಸೇರಿದಂತೆ ಪಂಚರಾಜ್ಯಗಳಲ್ಲಿನ ಸೋಲಿನ ಹಿನ್ನಲೆಯಲ್ಲಿ ಮಹತ್ವದ ಕಾಂಗ್ರೆಸ್ ಕಾರ್ಯಕಾರಿ, ಸಮಿತಿ ಸಭೆ ನಡೆದಿದ್ದು, ಮಧ್ಯಾಂತರ ಅಧ್ಯಕ್ಷೆ ಸೋನಿಯಾ ಅವರೇ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಸೋಲಿನ ಆತ್ಮಾವಲೋಕನಕ್ಕಾಗಿ ಭಾನುವಾರ ಸಭೆ ಕರೆಯಲಾಗಿತ್ತು. ಪಕ್ಷದ ನಾಯಕತ್ವದಲ್ಲಿ ಬದಲಾವಣೆ ಆಗಬೇಕು ಎಂಬ ಆಗ್ರಹ ಪಕ್ಷದ ಒಂದು ವರ್ಗದಿಂದ ಕೇಳಿ ಬಂದಿತ್ತು.
ಸೋನಿಯಾ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ಸುಮಾರು ನಾಲ್ಕೂವರೆ ತಾಸು ಚರ್ಚೆ ನಡೆಸಿದೆ. ಸೋಲಿನ ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ಸೋನಿಯಾ ಅವರು ಸಭೆಯಲ್ಲಿ ಹೇಳಿದ್ದು ಪಕ್ಷದ ಆಂತರಿಕ ಚುನಾವಣೆ ನಡೆಯುವವರೆಗೆ ಅಧ್ಯಕ್ಷರಾಗಿ ಮುಂದುವರಿಯುವಂತೆ ಸೋನಿಯಾ ಅವರನ್ನು ಸಿಡಬ್ಲ್ಯುಸಿ ಪಟ್ಟು ಹಿಡಿದಿದೆ.
ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಬೇಕು ಎಂಬ ದ್ವನಿ ಬಲವಾಗಿ ಕೇಳಿ ಬಂದಿದೆ. ರಾಹುಲ್ ಅಧ್ಯಕ್ಷರಾಗಲಿ ಎಂದು ಪಕ್ಷದ ಹಲವು ಮುಖಂಡರು ಸಿಡಬ್ಲ್ಯುಸಿ ಸಭೆಗೆ ಮೊದಲೇ ಹೇಳಿಕೆ ನೀಡಿದ್ದರು.