ನವದೆಹಲಿ, ಮಾ. 13(DaijiworldNews/SM): ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಯುದ್ಧ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಈಗಾಗಲೇ ಕರಾವಳಿ ಸೇರಿದಂತೆ ಭಾರತೀಯರನ್ನು ಸುರಕ್ಷಿತವಾಗಿ ಕರೆಸಿಕೊಳ್ಳುವಲ್ಲಿ ಭಾರತ ಸರಕಾರ ಯಶಸ್ವಿಯಾಗಿದೆ. ಆದರೆ, ರಷ್ಯಾ ದಾಳಿಗೆ ಬಲಿಯಾಗಿರುವ ಕನ್ನಡಿಗ ನವೀನ್ ಮೃತದೇಹ ತವರಿಗೆ ಮರಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಉನ್ನತಾಧಿಕಾರಿಗಳ ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ.
ನವೀನ್ ಮೃತದೇಹವನ್ನು ತಾಯ್ನಾಡಿಗೆ ತರುವ ನಿಟ್ಟಿನಲ್ಲಿ ಅಧಿಕಾರಿಗಳು ತಕ್ಷಣವೇ ಅಗತ್ಯ ಕ್ರಮಕೈಗೊಳ್ಳಬೇಕೆಂದು ಅವರು ಸೂಚಿಸಿದ್ದಾರೆ. ಉನ್ನತ ಅಧಿಕಾರಿಗಳ ಸಭೆಯಲ್ಲಿ ಭಾರತದ ಭದ್ರತಾ ಸಿದ್ಧತೆಯ ಬಗ್ಗೆಯೂ ಕೂಡ ಚರ್ಚೆ ನಡೆಸಲಾಗಿದೆ. ಅಲ್ಲದೆ ಸದ್ಯ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆಯೂ ಚರ್ಚಿಸಲಾಗಿದೆ.
ಇನ್ನು ರಕ್ಷಣಾ ಯಂತ್ರ, ಹೊಸ ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಹಳೇ ತಂತ್ರಜ್ಞಾನ ಹೊಂದಿದ್ದಲ್ಲಿ ಅವುಗಳನ್ನು ಆಧುನಿಕ ತಂತ್ರಜ್ಞಾನಕ್ಕೇರಿಸಬೇಕು. ಹಾಗೂ ಆದಷ್ಟು ಮೇಕ್ ಇನ್ ಇಂಡಿಯಾದ ತಂತ್ರಜ್ಞಾನಗಳನ್ನೇ ಬಳಸುವಂತೆ ಪ್ರಧಾಣಿ ಅಧಿಕಾರಿಗಳಿಗೆ ಸೂಚನೆ ನೀಡಿದರು.