ನವದೆಹಲಿ, ಮಾ 13 (DaijiworldNews/DB): ಉತ್ತರ ಪ್ರದೇಶ ರಾಜ್ಯದಲ್ಲಿ ಹೊಸ ಸಂಪುಟ ರಚಿಸುವ ಸಲುವಾಗಿ ಚರ್ಚಿಸಲು ಮಾಜಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದಾರೆ.
ಹೊಸ ಸಂಪುಟದ ಕುರಿತಾಗಿ ಮಾತನಾಡಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಯೋಗಿ ಆದಿತ್ಯನಾಥ್ ಅವರು ಭಾನುವಾರ ಸಂಜೆ ಭೇಟಿಯಾಗಲಿದ್ದಾರೆ. ಪ್ರಧಾನಿ ಭೇಟಿಗೂ ಮುನ್ನ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್, ಕೇಂದ್ರ ಸಚಿವ ಸರ್ಬಾನಂದ್ ಸೊನ್ವಾಲ್ ಮುಂತಾದವರೊಂದಿಗೆ ಚರ್ಚಿಸಿದರು.
ಪ್ರಧಾನಿ ಮೋದಿ ಭೇಟಿ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನೂ ಭೇಟಿ ಮಾಡಲಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕ ಸೇರಿದಂತೆ ವಿವಿಧ ಮಹತ್ವದ ವಿಚಾರಗಳನ್ನು ಈ ವೇಳೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಕೆಲವು ಮಾಹಿತಿಗಳ ಪ್ರಕಾರ ಯೋಗಿ ಆದಿತ್ಯನಾಥ್ ಅವರು ಹೋಳಿಗೂ ಮುನ್ನ ಮಾ.14 ಅಥವಾ 15ಕ್ಕೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. 7 ಹಂತಗಳಲ್ಲಿ ನಡೆದ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ 255 ಸ್ಥಾನಗಳಲ್ಲಿ ಗೆದ್ದಿದೆ. ಯೋಗಿ ಆದಿತ್ಯನಾಥ್ ಅವರು ಎರಡನೇ ಬಾರಿಗೆ ಸರಕಾರ ರಚಿಸುತ್ತಿದ್ದಾರೆ.