ಬೆಂಗಳೂರು, ಮಾ 13 (DaijiworldNews/DB): ಬೋಗಸ್ ಬಜೆಟ್ ಮಂಡಿಸುವ ಮೂಲಕ ರಾಜ್ಯ ಸರಕಾರ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಿದೆ ಎಂದು ಕಾಂಗ್ರೆಸ್ ಆಪಾದಿಸಿದೆ.
ಟ್ವೀಟರ್ ಮುಖಾಂತರ ಈ ಆರೋಪ ಮಾಡಿರುವ ಕಾಂಗ್ರೆಸ್, ಸರಕಾರ ಹಲವು ಕಾಮಗಾರಿಗಳಿಗೆ ಸಂಬಂಧಿಸಿದಂತೆ 75 ಸಾವಿರ ರೂ. ಬಿಲ್ ಬಾಕಿ ಉಳಿಸಿಕೊಂಡು ಗುತ್ತಿಗೆದಾರರೊಂದಿಗೆ ಚೌಕಾಸಿಗಿಳಿದಿದೆ. ಬೊಮ್ಮಾಯಿಯವರೇ ನಿಮ್ಮ ಆರ್ಥಿಕ ಶಿಸ್ತೆಂದರೆ ಇದೇನಾ? ಎಂದು ಪ್ರಶ್ನಿಸಿದೆ.
ಬೋಗಸ್ ಬಜೆಟ್ ಮೂಲಕ ಜನರ ಕಣ್ಣಿಗೆ ಮಣ್ಣೆರಚುವ ಬಿಜೆಪಿ ಸರಕಾರ ಅಸಲಿಗೆ ಯೋಜನೆಗಳಿಗೆ, ಕಾಮಗಾರಿಗಳಿಗೆ ಹಣ ನೀಡುವ ಯೋಗ್ಯತೆಯನ್ನೇ ಉಳಿಸಿಕೊಂಡಿಲ್ಲ ಎಂದು ತಿಳಿಸಿದೆ.
ಇನ್ನೊಂದು ಟ್ವೀಟ್ ನಲ್ಲಿ, ಮನೆ ಬಾಗಿಲಿಗೆ ಕಂದಾಯ ಇಲಾಖೆ ಎಂಬ ಪ್ರಚಾರದ ಕಾರ್ಯಕ್ರಮ ಹಮ್ಮಿಕೊಂಡಿರುವ ಸರ್ಕಾರ, ತಾಂತ್ರಿಕ ಲೋಪಗಳು, ಬಡವರ ಕಚೇರಿ ಅಲೆದಾಟವನ್ನು ಹೆಚ್ಚಿಸಿದೆ. ತಳಮಟ್ಟದ ಸಮಸ್ಯೆಗಳನ್ನು ಗಮನಿಸಿ ಬಗೆಹರಿಸುವ ಕೆಲಸವನ್ನು ಮಾಡಬೇಕಿದೆ ಎಂದು ತಿಳಿಸಿದೆ.