ವಾಷಿಂಗ್ಟನ್, ಮಾ 13 (DaijiworldNews/DB): ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದಕ್ಕೆ ಅಮೆರಿಕದಲ್ಲಿ ವಿಜಯೋತ್ಸವ ನಡೆಸಲಾಗಿದೆ.
ಈ ರಾಜ್ಯಗಳಲ್ಲಿ ಬಿಜೆಪಿ ಅತ್ಯುತ್ತಮ ಕೆಲಸ ಮಾಡಿದೆ. ಹೀಗಾಗಿ ಪಕ್ಷ ಮತ್ತೆ ಅಧಿಕಾರಕ್ಕೆ ಬಂದಿದೆ ಎಂದು ಅಮೆರಿಕನ್ ಇಂಡಿಯಾ ಪಬ್ಲಿಕ್ ಅಫೇರ್ಸ್ ಕಮಿಟಿಯ ಅಧ್ಯಕ್ಷ ಜಗದೀಶ್ ಸೇವ್ಹಾನಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜನಪರ ಆಡಳಿತ, ಪ್ರಾಮಾಣಿಕ ಸೇವೆಗಳ ಅನುಷ್ಠಾನ, ಕೊಟ್ಟ ಭರವಸೆಗಳ ಈಡೇರಿಕೆಯ ಫಲವಾಗಿ ಮತದಾರರು ಒಲಿದಿದ್ದಾರೆ. ಬಡವರು, ರೈತರು ಮತ್ತು ಅಭಿವೃದ್ಧಿ ಪರವಾದ ನೀತಿಗಳಿಗೆ ಜನರು ಮತ ನೀಡಿದ್ದಾರೆ. 2024ರ ಲೋಕಸಭೆ ಚುನಾವಣೆಯಲ್ಲಿ ಇದಕ್ಕಿಂತಲೂ ದೊಡ್ಡ ಮಟ್ಟದ ಗೆಲುವು ಸಿಗಲಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ನಾವು ನ್ಯೂಯಾರ್ಕ್ನಲ್ಲಿ ಬಿಜೆಪಿಯ ವಿಜಯದ ಸಂಭ್ರಮ ಆಚರಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ವಾಷಿಂಗ್ಟನ್ ಡಿಸಿ, ಹೂಸ್ಟನ್, ಲಾಸ್ ಏಂಜಲೀಸ್ ಮತ್ತು ಅಟ್ಲಾಂಟಾ ಸೇರಿ ಇತರ ನಗರಗಳಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ.