ಹುಬ್ಬಳ್ಳಿ, ಮಾ 13 (DaijiworldNews/DB): ಯಡಿಯೂರಪ್ಪ ಅವರು ತಮ್ಮ ಪುತ್ರನಿಗೆ ಸಚಿವ ಸ್ಥಾನ ಕೊಡಿಸಲು ಒತ್ತಡ ಹೇರುತ್ತಿದ್ದಾರೆ ಎಂಬ ಸುದ್ದಿಗಳು ಸುಳ್ಳು. ತಾನು ಸಚಿವಾಕಾಂಕ್ಷಿ ಅಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ, ಪುನಾರಚನೆಯ ವೇಳೆ ತನಗೆ ಸಚಿವ ಸ್ಥಾನ ನೀಡಬೇಕೆಂಬ ಯಾವ ಒತ್ತಡವನ್ನೂ ಹೇರಿಲ್ಲ ಎಂದು ಸ್ಪಷ್ಟಪಡಿಸಿದರು.
ವೈಯಕ್ತಿಕ ಕಾರಣದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದೆ. ಈ ವೇಳೆ ಕೆಲ ಸಂಘಟನೆಗಳ ಕುರಿತು ಚರ್ಚೆ ಮಾಡಿದ್ದೇವೆ. ಆದರೆ ಯಾವ ಸ್ಥಾನಮಾನ ಬೇಕೆಂದು ಕೇಳಿಲ್ಲ ಎಂದರು.
ಪಂಚ ರಾಜ್ಯಗಳ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಿದೆ. ಕರ್ನಾಟಕದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಗೆಲುವು ನಮ್ಮದಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಾರ್ಯಗಳು, ಸಿಎಂ ಬಸವರಾಜ ಬೊಮ್ಮಾಯಿ ಜನಪರ ಬಜೆಟ್ ಚುನಾವಣೆ ಗೆಲ್ಲಲು ಪೂರಕವಾಗಲಿದೆ ಎಂದ ಅವರು, ಕಾಂಗ್ರೆಸ್ ಸದಸ್ಯತ್ವ ನೋಂದಣಿಗೆ ಹಿನ್ನಡೆಯಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರೇ ಯುವ ಸಮಾವೇಶದಲ್ಲಿ ಹೇಳಿದ್ದರು.ಯುವಕರು ಕಾಂಗ್ರೆಸ್ ಗೆ ಹೋಗುತ್ತಿಲ್ಲ. ಮೋದಿ ಕಾರ್ಯಗಳೇ ಯುವಕರಿಗೆ ಶಕ್ತಿ ಮತ್ತು ಉತ್ಸಾಹ ತುಂಬುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಧೂಳಿಪಟ ಆಗಲಿದೆ ಎಂದವರು ತಿಳಿಸಿದರು.