ಮುಂಬೈ, ಮಾ 13 (DaijiworldNews/DB): ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಹೇಳಿಕೆ ದಾಖಲಿಸುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ದಕ್ಷಿಣ ಮುಂಬೈಯಲ್ಲಿನ ನಿವಾಸ ಮತ್ತು ಬಿಕೆಸಿ ಸೈಬರ್ ಪೊಲೀಸ್ ಠಾಣೆ ಹೊರಗಡೆ ಭಾನುವಾರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಬೆಂಬಲಿಗರು ಜಮಾಯಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ದಾಖಲಿಸಿಕೊಳ್ಳಲು ಹಾಜರಾಗುವಂತೆ ಮುಂಬೈ ಸೈಬರ್ ಪೊಲೀಸರು ಫಡ್ನವೀಸ್ ಅವರಿಗೆ ನೋಟಿಸ್ ಜಾರಿಗೊಳಿದ್ದರು. ಆದರೆ ಬಳಿಕ ಅಗತ್ಯ ಮಾಹಿತಿ ಪಡೆಯಲು ಪೊಲೀಸರು ತಮ್ಮ ನಿವಾಸಕ್ಕೇ ಆಗಮಿಸಲಿದ್ದಾರೆ ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ಫಡ್ನವಿಸ್ ಶನಿವಾರ ಮಾಹಿತಿ ಪಡೆದಿದ್ದರು.
ಪೊಲೀಸರು ಮಲಬಾರ್ ಹಿಲ್ ಪ್ರದೇಶದಲ್ಲಿರುವ ಫಡ್ನವಿಸ್ ನಿವಾಸಕ್ಕೆ ತೆರಳುವ ವೇಳೆ ಪಕ್ಷದ ಕಾರ್ಯಕರ್ತರು ಜಮಾಯಿಸುವ ಸಾಧ್ಯತೆಯಿರುವುದರಿಂದ ಅವರ ನಿವಾಸ ಮತ್ತು ಪೊಲೀಸ್ ಠಾಣೆಯ ಸುತ್ತಮುತ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ಐಪಿಎಸ್ ಅಧಿಕಾರಿ ರಶ್ಮಿ ಶುಕ್ಲಾ ಗುಪ್ತಚರ ಇಲಾಖೆ ಮುಖ್ಯಸ್ಥರಾಗಿದ್ದಾಗ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಾಟೊಲ್, ಸಿಚವ ಬಾಚ್ಚು ಕಾಡು, ಮಾಜಿ ಶಾಸಕರ ಅಶಿಶ್ ದೇಶ್ ಮುಖ್, ಮಾಜಿ ಸಂಸದ ಸಂಜಯ್ ಕಾಕಡೆ ಮತ್ತಿತರ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಕಳೆದ ತಿಂಗಳು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ಪಡೆಯಲಾಗುತ್ತಿದೆ.