ಚಿಕ್ಕಬಳ್ಳಾಪುರ, ಮಾ. 12 (DaijiworldNews/SM): ರೈತರ ಮಕ್ಕಳಿಗೆ ಶಿಕ್ಷಣ ದೊರೆತಾಗ ಅವರೂ ಕೂಡ ಸುಶಿಕ್ಷಿತರಾಗಲು ಸಾಧ್ಯ. ರೈತರು ಹಾಗೂ ಜನಸಾಮಾನ್ಯರಿಗೆ ಕಚೇರಿ ಅಲೆದಾಡುವುದನ್ನು ತಪ್ಪಿಸಲು ರೈತರು ಹಾಗೂ ಜನಸಾಮಾನ್ಯರ ಮನೆ ಬಾಗಿಲಿಗೆ ದಾಖಲೆಗಳನ್ನು ಒದಗಿಸುವ ಮಹತ್ವದ ಯೋಜನೆ ಕಂದಾಯ ದಾಖಲೆ ಮನೆ ಬಾಗಿಲಿಗೆ ಯೋಜನೆಗೆ ಸಿಎಂ ಬಸವರಾಜ್ ಬೊಮ್ಮಾಯಿಯವರು ಚಾಲನೆ ನೀಡಿದರು.
ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ಕಂದಾಯ ಇಲಾಖೆಯ ವಿವಿಧ ದಾಖಲೆಗಳನ್ನು ನೇರವಾಗಿ ರೈತರು ಮತ್ತು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದೆ.
ವಿನೂತನ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕಂದಾಯ ಇಲಾಖೆ ಗ್ರಾಮ ವಾಸ್ತವ್ಯ, ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಎಂಬ ವಿನೂತನ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಈಗಾಗಲೇ ಪರಿಚಯಿಸುವ ಮೂಲಕ ಗಮನಸೆಳೆದಿರುವ ಕಂದಾಯ ಇಲಾಖೆ ಈಗ ಪಹಣಿ, ಅಟ್ಲಾಸ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿದಂತೆ ವಿವಿಧ ದಾಖಲೆಗಳನ್ನು ನೇರವಾಗಿ ರೈತರು ಮತ್ತು ಸಾರ್ವಜನಿಕರ ಮನೆಬಾಗಿಲಿಗೆ ಉಚಿತವಾಗಿ ತಲುಪಿಸುವ ಮಹತ್ವದ ಯೋಜನೆಗೆ ಇಂದು ಚಾಲನೆ ನೀಡಿದೆ ಎಂದರು.
ಸದ್ಯ ಸರಕಾರ ಹೊಸ ಯೋಜನೆಗೆ ಚಾಲನೆ ನೀಡಿದ್ದು, ಎಷ್ಟರ ಮಟ್ಟಿಗೆ ಅಧಿಕಾರಿಗಳು ಈ ಯೋಜನೆಯನ್ನು ಸಾಕಾರಗೊಳ್ಳುತ್ತದೆ ಎಂಬುವುದು ಕಾತರದ ಸಂಗತಿ.