ಚಿಕ್ಕಮಗಳೂರು, ಮಾ 11 (DaijiworldNews/DB): 'ಸಿದ್ದರಾಮಯ್ಯ ಆಪ್ತ ಸಿ. ಎಂ. ಇಬ್ರಾಹಿಂ ಕಾಂಗ್ರೆಸ್ ತ್ಯಜಿಸಿದ್ದಾರೆ. ಇನ್ನು ಸಿದ್ದು ಕೂಡಾ ಕಾಂಗ್ರೆಸ್ ತೊರೆದರೆ ಆಶ್ಚರ್ಯ ಇಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಇಬ್ರಾಹಿಂ-ಸಿದ್ಧರಾಮಯ್ಯ ಆತ್ಮೀಯ ಸ್ನೇಹಿತರು. ಇಬ್ರಾಹಿಂ ಅವರನ್ನು ಮುಂದೆ ಕಳುಹಿಸಿ ಬಳಿಕ ಸಿದ್ಧರಾಮಯ್ಯ ಪಕ್ಷ ತೊರೆಯಲೂಬಹುದು ಎಂದರು.
ಆಮಿಷವೊಡ್ಡಿ ಪಕ್ಷದ ಸದಸ್ಯತ್ವ ಮಾಡಿಸಿದರೆ ಆ ಸದಸ್ಯರಿಗೆ ಪಕ್ಷ ಬದ್ಧತೆ ಇರುವುದಿಲ್ಲ. ಪಕ್ಷದ ವಿಚಾರಧಾರೆ, ನಾಯಕತ್ವ ತಿಳಿದುಕೊಂಡವರು ಮಾತ್ರ ಬದ್ಧತೆಯಿಂದ ಕೆಲಸ ಮಾಡುತ್ತಾರೆ. ಆದರೆ ಕಾಂಗ್ರೆಸ್ ಗೆ ಇದ್ಯಾವುದೂ ಇಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಸಂಪುಟ ಪುನಾರಚನೆ ಮಾಡಬೇಕೆಂಬುದು ಹಲವು ಶಾಸಕರ ಅಪೇಕ್ಷೆ. ನಾಯಕತ್ವದ ಬದಲಾವಣೆ ಇಲ್ಲ ಎಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ ಎಂದು ಸಿ.ಟಿ. ರವಿ ತಿಳಿಸಿದರು.