ಬೆಂಗಳೂರು, ಮಾ 11 (DaijiworldNews/DB): ಕಾಂಗ್ರೆಸ್ ನಲ್ಲಿ ಬಸಿರು ಮಾಡುವುದಕ್ಕೆ, ಹೆರಿಗೆ ಮಾಡಿಸುವುದಕ್ಕೆ ನಾವು ಬೇಕು. ಹೆಸರು ಮಾತ್ರ ಬೇರೆಯವರದು ಇಡುತ್ತಾರೆ. ಯು. ಟಿ. ಖಾದರ್ ಗೆ ಕೊಟ್ಟಿರುವುದು ಚಡ್ಡಿ ಎಂದು ಸಿ.ಎಂ. ಇಬ್ರಾಹಿಂ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷದ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಗೊಡ್ಡು ಎಮ್ಮೆಗಳು ಇವೆಯೇ ಹೊರತು ಮತ ತರುವ ಹಸುಗಳಿಲ್ಲ. ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎನ್ನುತ್ತಾರೆ. ಆದರೆ ಒಳ್ಳೆಯದನ್ನೆಲ್ಲ ಅವರು ಇಟ್ಟುಕೊಂಡು, ಬೇಡವಾದದ್ದನ್ನು ನಮಗೆ ಕೊಡುತ್ತಾರೆ. ಹಿಜಾಬ್ ನ್ನು ಸೆರಗು ಅನ್ನಿ ಎಂದೆ. ನನ್ನ ಸಲಹೆ ಕೇಳಿಲ್ಲ. ಯು.ಟಿ.ಖಾದರ್ಗೆ ಅವರು ಕೊಟ್ಟಿರುವುದು ಚಡ್ಡಿ ಎಂದು ಬೇಸರ ವ್ಯಕ್ತಪಡಿಸಿದರು.
ಕಾಂಗ್ರೆಸ್ನವರು ಚೆನ್ನಾಗಿ ಮೇಕಪ್ ಮಾಡಿ, ಬಸ್ ಸ್ಟ್ಯಾಂಡ್ನಲ್ಲಿ ನಿಲ್ಲಿಸಿ ಹೋಗುವವರನ್ನು, ಬರುವವರನ್ನು ಕರೆಯುವ ಕೆಲಸ ಮಾಡಿಸುತ್ತಾರೆ. ಸಿದ್ಧರಾಮಯ್ಯರನ್ನು ನಂಬಿ ಕಾಂಗ್ರೆಸ್ ಸೇರಿದ್ದೆ. ಈಗ ನಡು ನೀರಿನಲ್ಲಿ ಕೈ ಬಿಟ್ಟಿದ್ದಾರೆ. ಮಾನದ ನಿರೀಕ್ಷೆಯಿಂದ ಜೆಡಿಎಸ್ ಗೆ ಹೋಗುತ್ತಿದ್ದೇನೆ. ಸ್ಥಾನವನ್ನು ನಿರೀಕ್ಷಿಸಿ ಅಲ್ಲ ಎಂದರು.
ಸಿದ್ಧರಾಮಯ್ಯ ನಮ್ಮ ಮನೆಗೆ ಬಂದರೆ ಸ್ವಾಗತ. ಬಂದು ಬಿರಿಯಾನಿ ತಿನ್ನಲಿ ಎಂದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದಿಲ್ಲ. ಅವರು ಕಾಂಗ್ರೆಸ್ನಲ್ಲಿ 50 ಡಿಗ್ರಿ ಟೆಂಪರೇಚರ್ನಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.