ಗುರುಗ್ರಾಮ್, ಮಾ 12 (DaijiworldNews/HR): ಖತರ್ನಾಕ್ ಕಳ್ಳರ ತಂಡವೊಂದು ಮನೆಯೊಂದಕ್ಕೆ ಕನ್ನ ಹಾಕಿದ್ದು, ಕಳ್ಳತನ ಮಾಡಿ ಎಸ್ಕೇಪ್ ಆಗಬೇಕು ಅನ್ನೋವಷ್ಟರಲ್ಲಿ ಅವರದ್ದೇ ಟೀಂನ ಕಳ್ಳನೊಬ್ಬ ಶೌಚಾಲಯಕ್ಕೆ ಕಣ್ಣು ಹಾಕಿದಾಗ ಅಲ್ಲಿದ್ದ ಸೊತ್ತುಗಳನ್ನ ನೋಡಿ ಅಕ್ಷರಶಃ ಬೆಚ್ಚಿಬಿದ್ದು ಗ್ಯಾಂಗ್ನ ಸದಸ್ಯರನ್ನೆಲ್ಲ ಕರೆದು ಶೌಚಾಲಯದೊಳಗೆ ನೋಡಿದಾಗ ಅಲ್ಲಿ ಇದ್ದದ್ದು ಪಿನಾಯಿಲ್ಗಳಲ್ಲ ಬದಲಾಗಿ ಗ್ರೇನೆಡ್, ಮದ್ದುಗುಂಡುಗಳು.
ಈ ಘಟನೆ ನಡೆದಿದ್ದು ಹರ್ಯಾಣದ ಗುರುಗ್ರಾಮ್ ಅನ್ನೋ ಪ್ರದೇಶದಲ್ಲಿ. ಶೌಚಾಲಯದಲ್ಲಿ ಗ್ರೇನೇಡ್, ಮದ್ದುಗುಂಡುಗಳು ಸ್ಫೋಟಗೊಳ್ಳಬಹುದು ಎಂಬ ಆತಂಕದಲ್ಲಿ ತಕ್ಷಣ ಮನೆಯಿಂದ ಕದ್ದ ಚೀಲವನ್ನು ಬಿಟ್ಟು ಪಲಾಯನ ಮಾಡಿದ್ದಾರೆ.
ಇನ್ನು ಮನೆಯನ್ನು ಸ್ಫೋಟಿಸಲು ಪ್ಲಾನ್ ಮಾಡಲಾಗಿತ್ತೋ ಅಥವಾ ಮನೆಯಲ್ಲಿ ಅಕ್ರಮವಾಗಿ ಬಾಂಬ್ ತಯಾರಿಸಲಾಗುತ್ತಿತ್ತೇ ಅನ್ನೋದು ತಿಳಿಯದೆ ಚಡಪಡಿಸುತ್ತಿದ್ದರು. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲು ಹೆದರುತ್ತಿದ್ದ ಅವರು ಕೊನೆಗೂ ಹೇಗೋ ಧೈರ್ಯ ಮಾಡಿ ಮರುದಿನ ಬೆಳಗ್ಗೆ ಪೊಲೀಸರಿಗೆ ಕರೆ ವಿಷಯ ತಿಳಿಸಿದ್ದಾರೆ.
ಕಳ್ಳರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆ ಮನೆಯನ್ನು ಪರಿಶೀಲಿಸಿದಾಗ ಅಲ್ಲಿ ಸ್ಫೋಟಕಗಳು ಪತ್ತೆಯಾಗಿದ್ದು, ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆ ಮನೆಯಲ್ಲಿ 2 ಗ್ರೇನೇಡ್ಗಳು, 2 ಪಾಲಿಥೀನ್ ಬ್ಯಾಗ್ಗಳು, ಅದರಲ್ಲಿ ಒಂದರಲ್ಲಿ ಮಿಲಿಟರಿಯಲ್ಲಿ ಬಳಸಲ್ಪಡುವ ಗ್ರೇನೇಡ್ನ್ನು ತುಂಬಿಸಲಾಗಿತ್ತು. ಮತ್ತು ಬಿಕಾಟ್ ಸ್ಟ್ರಿಪ್ (ಯುದ್ಧದ ಸಮಯದಲ್ಲಿ ಶತ್ರುಗಳನ್ನು ದಾರಿ ತಪ್ಪಿಸಲು ಬಳಸಲ್ಪಡುವ ಬೆಂಕಿ ಹತ್ತಿಕೊಂಡಾಗ ಸ್ವಯಂಚಾಲಿತವಾಗಿ ಗುಂಡಿನ ಚಕಮಕಿಯನ್ನು ಅನುಕರಿಸುವ ಸಾಧನ), ಮತ್ತು 43 ಖಾಲಿ ಕಾರ್ಟ್ರಿಡ್ಜ್ಗಳು (ಲಾಂಗ್ರೇಂಜ್ ಆಟೋಮ್ಯಾಟಿಕ್ ವೆಪನ್) ಪತ್ತೆಯಾಗಿದೆ. ಅವುಗಳನ್ನೆಲ್ಲ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.