ಹುಬ್ಬಳ್ಳಿ, ಮಾ 11 (DaijiworldNews/DB): ಹುಬ್ಬಳ್ಳಿಯಲ್ಲಿ ಪತ್ನಿಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ ಅನ್ಯಕೋಮಿನ ಯುವಕನ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾದ ಮಹಿಳೆ ಅಪೂರ್ವಾ ಅವರನ್ನು ಹುಬ್ಬಳ್ಳಿಯ ಸುಚಿರಾಯು ಆಸ್ಪತ್ರೆಯಲ್ಲಿ ಶನಿವಾರ ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗದುಗಿನ ಅಪೂರ್ವಾ ಪುರಾಣಿಕ ಅವರನ್ನು ಹುಬ್ಬಳ್ಳಿಯ ಕೌಲಬಜಾರ್ ನಿವಾಸಿ ಅನ್ಯಕೋಮಿನ ಯುವಕ ಪ್ರೀತಿಸಿ ಮನೆಯವರ ವಿರೋಧದ ನಡುವೆಯೂ 2018ರಲ್ಲಿ ಮದುವೆಯಾಗಿದ್ದರು. ಆದರೆ ಮೂರು ದಿನಗಳ ಹಿಂದೆ ಆತ ಪತ್ನಿ ಮೇಲೆ 28 ಬಾರಿ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ. ಹಲ್ಲೆ ನಡೆಸಿದ ಯುವಕನನ್ನು 24 ಗಂಟೆಯೊಳಗೆ ಪೊಲೀಸರು ಬಂಧಿಸಿರುವುದು ಪ್ರಶಂಸನೀಯ. ಆದರೆ ಆತನ ಮೇಲೆ ಪೊಲೀಸರು ಕಠಿಣ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.