ಹುಬ್ಬಳ್ಳಿ, ಮಾ 11 (DaijiworldNews/DB): ಮಹಾದಾಯಿ ವಿಚಾರದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಪ್ರದರ್ಶಿಸುತ್ತಿದೆ ಎಂದು ಶಾಸಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕರ್ನಾಟಕಕ್ಕೆ ನೀರು ಕೊಡುವುದಿಲ್ಲ ಎಂದು ಗೋವಾ ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ಸಿಗರು ಮಹದಾಯಿಗಾಗಿ ಪಾದಯಾತ್ರೆ ನಡೆಸುತ್ತೇವೆ ಎನ್ನುತ್ತಾರೆ. ಇದು ಕಾಂಗ್ರೆಸ್ ನ ದ್ವಂದ್ವ ನಿಲುವನ್ನು ಸೂಚಿಸುತ್ತದೆ ಎಂದರು.
ಮಹದಾಯಿ ವಿಚಾರದಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಸಮಸ್ಯೆ ಪರಿಹಾರಗೊಂಡ ಮೇಲೆ ಕಾಮಗಾರಿ ಆರಂಭವಾಗುತ್ತದೆ. ಆದರೆ ಕಾಂಗ್ರೆಸ್ ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಸೋಜಿಗ ಎಂದವರು ತಿಳಿಸಿದರು.
ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯದು. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಹಾಗೂ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಯಾವುದೇ ಕಾರಣಕ್ಕೂ ನಾನು ಸಂಪುಟ ಸೇರುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.
ಭಾರತ ಕಾಂಗ್ರೆಸ್ ಮುಕ್ತವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದರು. ಈಗಿನ ದೇಶದ ರಾಜಕಾರಣ ಅದೇ ರೀತಿ ಸಾಗುತ್ತಿದೆ. ಕರ್ನಾಟಕ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಬಣಗಳು ಬೇರೆ, ಬೇರೆಯಾಗಿವೆ. ಅವರಲ್ಲೇ ಗುಂಪುಗಾರಿಕೆ ಆರಂಭವಾಗಿದೆ ಎಂದರು.