ಬೆಂಗಳೂರು, ಮಾ 11 (DaijiworldNews/DB): ನರೇಂದ್ರ ಮೋದಿಯವರು ಚುನಾವಣೆಯನ್ನು ನಿಷ್ಠೆಯಿಂದ ತೆಗೆದುಕೊಂಡು ನಾಲ್ಕು ದಿಕ್ಕುಗಳಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುತ್ತಾರೆ. ಈ ನಿಷ್ಠೆ ನಮ್ಮಲ್ಲೂ ಬರಬೇಕು. ಇದನ್ನು ಚರ್ಚಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮಾರ್ಚ್ 20ರಂದು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ಪಕ್ಷವನ್ನು ಉಳಿಸಬೇಕೆಂಬ ಬದ್ಧತೆ ಯಾರಿಗೆ ಇದೆಯೋ ಆಂತಹವರಿಂದ ಸಂಘಟನೆ ಮಾಡುತ್ತೇವೆ. ಸಮಾವೇಶದಲ್ಲಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಪಂಚರಾಜ್ಯ ಚುನಾವಣೆಯಲ್ಲಿ ನಾಲ್ಕು ಕಡೆ ಜನರ ತೀರ್ಪು ಬಿಜೆಪಿ ಪರವಾಗಿಯೇ ಇತ್ತು. ಸ್ಥಳೀಯ ಕಾಂಗ್ರೆಸ್ ಬಗ್ಗೆ ನಾನೇನು ಮಾತನಾಡುವುದಿಲ್ಲ. ಆದರೆ ಮನಮೋಹನ್ ಸಿಂಗ್ ಬಳಿಕ ಬಿಜೆಪಿಯನ್ನು ಮಣಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದವರು ಅಭಿಪ್ರಾಯಪಟ್ಟರು.
ಅವಧಿಗೂ ಮುನ್ನ ರಾಜ್ಯದಲ್ಲಿ ಚುನಾವಣೆ ಬಂದರೆ ನಾವಂತೂ ಚುನಾವಣೆ ಎದುರಿಸುವುದಕ್ಕೆ ಸಿದ್ದರಿದ್ದೇವೆ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಜೆಟ್ ನಲ್ಲಿ ಬಿಜೆಪಿಯವರು ಕೃಷ್ಣಾ ಮೇಲ್ದಂಡೆ ಯೋಜನೆಗೆ ಐದು ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಆದರೆ ಅದರ ಯೋಜನಾ ವೆಚ್ಚವೇ 8 ಸಾವಿರ ಕೋಟಿ ಇದೆ. ಈ ಮೂರು ಸಾವಿರ ಕೋಟಿ ರೂ.ಗಳಲ್ಲಿ ಏನು ಮಾಡುತ್ತಾರೆ ಎಂದವರು ಪ್ರಶ್ನಿಸಿದರು.
ಕಾಂಗ್ರೆಸ್ ಎಂಎಲ್ ಸಿ ಸಿ.ಎಂ. ಇಬ್ರಾಹಿಂ ಪಕ್ಷ ಸೇರುವ ವಿಚಾರ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದೆ. ಆದರೆ ನನ್ನ ಬಳಿ ಯಾವುದೇ ಚರ್ಚೆ ಮಾಡಿಲ್ಲ ಎಂದವರು ಪ್ರತಿಕ್ರಿಯೆ ನೀಡಿದರು.