ಅಘ್ಫಾನಿಸ್ತಾನ, ಮಾ 11 (DaijiworldNews/DB): ಮದುವೆ ಆದ ಮರು ಕ್ಷಣದಲ್ಲೇ ಅಫ್ಘಾನಿಸ್ತಾನದಲ್ಲಿಆತ್ಮಾಹುತಿ ದಾಳಿ ನಡೆಸಿದ ಕೇರಳ ಮೂಲದ ಉಗ್ರ ಸಾವನ್ನಪ್ಪಿದ್ದಾನೆ.
ಮೃತ ಉಗ್ರನನ್ನು ಕೇರಳ ಮೂಲದ 23 ವರ್ಷದ ನಜೀಬ್ ಅಲ್ ಹಿಂದ್ ಎಂದು ಗುರುತಿಸಲಾಗಿದೆ. ಈತ ಇಂಜಿನಿಯರಿಂಗ್ ಪದವೀಧರನಾಗಿದ್ದು, ಪದವಿ ಮುಗಿಸಿದ ಬಳಿಕ ಉದ್ಯೋಗದ ಹಾದಿ ಹಿಡಿಯುವ ಬದಲು ಅಪ್ಘಾನ್ ಗೆ ತೆರಳಿ ಉಗ್ರರೊಂದಿಗೆ ಸೇರಿಕೊಂಡಿದ್ದ. ಜಾಗತಿಕ ಭಯೋತ್ಪಾದಕ ಸಂಘಟನೆ ಐಎಸ್ಐಎಸ್ನ ಅಫ್ಘಾನ್ ಶಾಖೆಯಾದ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾವಿನೆನ್ಸ್ (ಐಎಸ್ಕೆಪಿ) ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ.
ಇದೀಗ ಅಪ್ಘಾನ್ ನಲ್ಲಿ ದಾಳಿ ನಡೆಸಿ ತನ್ನನ್ನು ತಾನೇ ಸ್ಪೋಟಿಸಿಕೊಂಡು ಸಾವನ್ನಪ್ಪಿದ್ದಾನೆ. ಸಾಯುವುದಕ್ಕೆ ಕೆಲವೇ ಗಂಟೆಗಳ ಹಿಂದೆಯಷ್ಟೇ ಆತ ಪಾಕಿಸ್ತಾನ ಮೂಲದ ಯುವತಿಯನ್ನು ಮದುವೆಯಾಗಿದ್ದ. ಯುವತಿಯ ಕುಟುಂಬಸ್ಥರು ಐಎಸ್ಕೆಪಿ ಉಗ್ರ ಸಂಘಟನೆಯೊಂದಿಗೆ ಸಂಬಂಧ ಇರಿಸಿಕೊಂಡಿದ್ದರು ಎಂಬುದಾಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಯುವತಿಯ ತಂದೆಯ ಒತ್ತಾಯದ ಮೇರೆಗೆ ಆತ ವಿವಾಹವಾಗಿದ್ದು, ಹುತಾತ್ಮನಾಗುವುದರ ಬಗ್ಗೆಯೇ ಯೋಚಿಸುತ್ತಿದ್ದ. ಸ್ವಯಂ ಪ್ರೇರಣೆಯಿಂದಲೇ ಉಗ್ರ ಸಂಘಟನೆ ಸೇರಿದ್ದ ಎಂದು ಇತ್ತೀಚೆಗೆ ಬಿಡುಗಡೆಯಾದ ಉಗ್ರಗಾಮಿ ಸಂಘಟನೆಯ ನಿಯತಕಾಲಿಕೆ ವಾಯ್ಸ್ ಆಫ್ ಖೊರಾಸನ್ನಲ್ಲಿ ಮಾಹಿತಿ ಇತ್ತಂತೆ.
ಅಘ್ಘಾನಿಸ್ತಾನದಲ್ಲಿ ಬಾಂಬ್ ದಾಳಿ ನಡೆದಿರುವುದಕ್ಕೆ ಕಾರಣ, ಸಮಯ ಮುಂತಾದ ವಿಚಾರಗಳು ತಿಳಿದು ಬಂದಿಲ್ಲ. ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಅದರೊಂದಿಗೆ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಹಲವು ಬಾರಿ ಹೋರಾಡಿದೆ. ಅನೇಕ ಆತ್ಮಹತ್ಯಾ ದಾಳಿಗಳನ್ನೂ ನಡೆಸಿದ್ದು, ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ.