ಬೆಂಗಳೂರು, ಮಾ 11 (DaijiworldNews/DB): ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ರನ್ನು ಅಮಾನತುಗೊಳಿಸಲಾಗಿದೆ.
ಸರ್ವೋದಯ ಶಿಕ್ಷಣ ಸಂಸ್ಥೆ ವಿವಾದ ಹಿನ್ನೆಲೆಯಲ್ಲಿ ನಡೆದ ಗಲಾಟೆಗೆ ಹೊರಟ್ಟಿ ಅವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿ ಜನವರಿ 25ರಂದು ಹೊರಟ್ಟಿ ವಿರುದ್ಧ ಧಾರವಾಡ ಗ್ರಾಮಿಣ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಸಭಾಪತಿ ವಿರುದ್ಧ ಪ್ರಕರಣ ದಾಖಲಿಸಿ ಆ ಸ್ಥಾನಕ್ಕೆ ಅಪಮಾನ ಮಾಡಿರುವ ಇನ್ಸ್ ಪೆಕ್ಟರ್ ಅವರನ್ನು ಕೆಲಸದಿಂದ ಅಮಾನತುಗೊಳಿಸಬೇಕೆಂದು ಜೆಡಿಎಸ್ ಸದಸ್ಯರು ಪರಿಷತ್ ನಲ್ಲಿ ಪಟ್ಟು ಹಿಡಿದಿದ್ದರು. ಇದೀಗ ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಡಿಜಿಪಿ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದಾರೆ.