ಶಿವಮೊಗ್ಗ, ಮಾ 11 (DaijiworldNews/DB): ನಗರದ ಕಾಲೇಜೊಂದರ ಹಾಸ್ಟೆಲ್ ನಲ್ಲಿ ವಿಷಾಹಾರ ಸೇವನೆಯಿಂದ ಗುರುವಾರ ರಾತ್ರಿ 20ಕ್ಕೂ ಅಧಿಕ ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ 11 ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ಬಾಲಕಿಯರ ಹಾಸ್ಟೆಲ್ ನಲ್ಲಿ ರಾತ್ರಿ ಊಟ ಸೇವನೆ ಮಾಡಿದ ಬಳಿಕ ಕೆಲವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಉಸಿರಾಟದ ತೊಂದರೆ, ತಲೆಸುತ್ತು, ವಾಂತಿ-ಬೇಧಿ ಕಾಣಿಸಿಕೊಂಡಿತ್ತು. ತತ್ ಕ್ಷಣ ಅಸ್ವಸ್ಥ ವಿದ್ಯಾರ್ಥಿನಿಯರನ್ನು ಸಮೀಪದಲ್ಲಿರುವ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ವಿದ್ಯಾರ್ಥಿನಿಯರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಈ. ಕಾಂತೇಶ್, ಕುವೆಂಪು ವಿವಿ ಸಿಂಡಿಕೇಟ್ ಸದಸ್ಯ ಬಳ್ಳೆಕೆರೆ ಸಂತೋಷ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು.