ನವದೆಹಲಿ, ಮಾ 11 (DaijiworldNews/DB): ಗೆಲುವು ಸಾಧಿಸಿದರೂ ಸ್ಪಷ್ಟ ಬಹುಮತದ ಕೊರತೆ ಎದುರಿಸುತ್ತಿದ್ದ ಗೋವಾ ಬಿಜೆಪಿಗೆ ಮೂವರು ಪಕ್ಷೇತರರು ಬೆಂಬಲಿಸಿದ್ದ ಬೆನ್ನಲ್ಲೇ ಇದೀಗ ಎಂಜಿಪಿ ಪಕ್ಷದ ಇಬ್ಬರು ಅಭ್ಯರ್ಥಿಗಳು ಬೆಂಬಲ ಘೋಷಿಸಿದ್ದಾರೆ. ಇದರಿಂದ ಮತ್ತೊಮ್ಮೆ ಸರ್ಕಾರ ರಚಿಸಲು ಬಿಜೆಪಿಗೆ ಹಾದಿ ಇನ್ನಷ್ಟು ಸುಗಮವಾಗಿದೆ.
ಪ್ರಾದೇಶಿಕ ಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಎರಡು ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಈ ಇಬ್ಬರೂ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ.
40 ಸದಸ್ಯಬಲ ಹೊಂದಿರುವ ಗೋವಾ ವಿಧಾನಸಭೆಯಲ್ಲಿ ಬಿಜೆಪಿ 20 ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಆದರೆ ಬಹುಮತಕ್ಕೆ 21 ಸೀಟುಗಳ ಅವಶ್ಯಕತೆಯಿದ್ದ ಕಾರಣ ಸರ್ಕಾರ ರಚನೆಗೆ ತೊಡಕುಂಟಾಗಿತ್ತು. ಬಳಿಕ ಮೂವರು ಪಕ್ಷೇತರರು ಬೆಂಬಲ ಘೋಷಿಸಿದ್ದರಿಂದ ಒಟ್ಟು ಸದಸ್ಯಬಲ 23 ಆಗಿತ್ತು. ಇದೀಗ ಎಂಜಿಪಿ ಬೆಂಬಲದೊಂದಿಗೆ ಬಿಜೆಪಿ 25 ಸ್ಥಾನಗಳನ್ನು ಹೊಂದಿದೆ.
ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಾಗಿ ಗೋವಾ ಬಿಜೆಪಿ ಹೇಳಿದೆ. ಸೋಮವಾರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.