ಬೆಂಗಳೂರು, ಮಾ 11 (DaijiworldNews/HR): ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೆ ಎಫ್ಐಆರ್ ದಾಖಲಿಸಿದ್ದ ಅಧಿಕಾರಿಗಳನ್ನು ತಕ್ಷಣವೇ ಅಮಾನತು ಮಾಡುವಂತೆ ಸದಸ್ಯರು ಸದನದಲ್ಲಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ , 'ಬೆಂಗಳೂರಿನಲ್ಲಿದ್ದರೂ ನನ್ನ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದ್ದು, ಒಂದು ಶಾಲೆಯಲ್ಲಿ ಗಲಾಟೆ ನಡೆದಿರುವುದಕ್ಕೆ ಪ್ರಕರಣ ದಾಖಲಿಸಿ ಮಧ್ಯ ರಾತ್ರಿ 12.30ಕ್ಕೆ ಆನ್ಲೈನ್ ಮೂಲಕ ಎಫ್ಐಆರ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ರಾತ್ರಿ ಮೂರು ಗಂಟೆಗೆ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೂರವಾಣಿ ಮೂಲಕ ಮಾಹಿತಿ ನೀಡಿದರು. ಎರಡು ದಿನದ ಬಳಿಕ ಕ್ಷಮೆಯಾಚಿಸಿ, ತಪ್ಪಾಗಿದೆ ಎಂದಿರುವುದಾಗಿ ಎಂದು ವಿವರಿಸಿದ್ದಾರೆ.
ಇನ್ನು ಧಾರವಾಡ ಜಿಲ್ಲೆಯ ಮುಗದನಲ್ಲಿ ಸರ್ವೋದಯ ಶಿಕ್ಷಣ ಸಂಸ್ಥೆಯ ಆಡಳಿತ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾ ವಾಲ್ಮೀಕಿ ಸಂಘದ ಅಧ್ಯಕ್ಷ ಮೋಹನ್ ನೀಡಿದ ದೂರಿನ ಮೇರೆಗೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜನವರಿ 25ರಂದು ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿತ್ತು.