ಪಣಜಿ, ಮಾ 10 (DaijiworldNews/DB): ಗೋವಾ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿಗೆ ಮೂವರು ಪಕ್ಷೇತರರು ಬೆಂಬಲ ಸೂಚಿಸಿದ್ದು, ಬಿಜೆಪಿಗೆ ಸರಕಾರ ರಚಿಸುವ ಹಾದಿ ಸುಗಮವಾಗಿದೆ.
ಗೋವಾ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಸರಕಾರ ರಚನೆಗೆ 21 ಸದಸ್ಯರ ಅಗತ್ಯವಿದೆ. ಹೀಗಾಗಿ ಜಯ ಸಾಧಿಸಿದರೂ ಸರಕಾರ ರಚನೆ ಮಾಡುವಲ್ಲಿ ಬಿಜೆಪಿಗೆ ಸವಾಲು ಎದುರಾಗಿತ್ತು. ಇದೀಗ ಮೂವರು ಪಕ್ಷೇತರರು ಬಿಜೆಪಿ ಗೆ ಬೆಂಬಲ ಘೋಷಿಸಿರುವುದರಿಂದ ಬಿಜೆಪಿಗೆ ಸರಕಾರ ರಚನೆಯ ಹಾದಿ ಸುಗಮವಾದಂತಾಗಿದೆ.
ಗೋವಾದಲ್ಲಿ ಬಿಜೆಪಿ 18, ಕಾಂಗ್ರೆಸ್ 11, ಎಎಪಿ 2, ಎಂಜಿಪಿ ಮೈತ್ರಿಕೂಟ 4, ಇತರರು ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಗೆ ಮೂರು ಸದಸ್ಯಬಲದ ಕೊರತೆ ಇದ್ದು, ಇದೀಗ ಪಕ್ಷೇತರರ ಬೆಂಬಲದಿಂದ ಕೊರತೆ ನಿವಾರಣೆಯಾಗಿದೆ.
ಪಕ್ಷೇತರ ಅಭ್ಯರ್ಥಿಗಳಾದ ಕಾರ್ಟಲಿಮ್ ಕ್ಷೇತ್ರದ ಮ್ಯಾನುಯೆಲ್ ವಾಜ್, ಕರ್ಟೋರಿಮ್ ಕ್ಷೇತ್ರದ ಅಲೆಕ್ಸಿಯೊ ರೆಗಿನಾಲ್ಡೊ ಮತ್ತು ಬಿಚೊಲಿಮ್ ಕ್ಷೇತ್ರದ ಡಾ. ಚಂದ್ರಕಾಂತ್ ಶೆಟ್ಟಿ ಬೆಂಬಲ ನೀಡಿದ ಪಕ್ಷೇತರರು.