ನವದೆಹಲಿ, ಮಾ 10 (DaijiworldNews/DB): ಪಂಜಾಬ್ ನ ಹಾಲಿ ಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಚರಣ್ ಜಿತ್ ಸಿಂಗ್ ಚನ್ನಿ ಸ್ಪರ್ಧಿಸಿದ್ದ ಎರಡೂ ಕ್ಷೇತ್ರಗಳಲ್ಲಿ ಸೋಲನುಭವಿಸಿದ್ದಾರೆ.
ಚನ್ನಿ ಚಮ್ ಕೌರ್ ಹಾಗೂ ಬಾದೌರ್ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರು. ಬದೌರ್ ನಲ್ಲಿ ಆಮ್ ಆದ್ಮಿ ಪಕ್ಷದ ಲಾಭ್ ಸಿಂಗ್ ಉಗೋಕೆ 57,000 ಮತದೊಂದಿಗೆ ಜಯ ಗಳಿಸಿದ್ದಾರೆ. ಕಾಂಗ್ರೆಸ್ ನ ಚನ್ನಿ ಕೇವಲ 23,000 ಮತಗಳೊಂದಿಗೆ ಪರಾಭವಗೊಂಡಿದ್ದಾರೆ.
ಚಮ ಕೌರ್ ಸಾಹೀಬ್ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಒಂದೇ ಹೆಸರಿನ ಇಬ್ಬರನ್ನು ಕಣಕ್ಕಿಳಿಸಿತ್ತು. ಇಲ್ಲಿ ಚರಣ್ ಜಿತ್ ಚನ್ನಿ 50,000 ಮತ ಪಡೆದುಕೊಂಡರೆ ಅವರ ಪ್ರತಿಸ್ಪರ್ಧಿ ಆಮ್ ಆದ್ಮಿ ಪಾರ್ಟಿಯ ಚರಣ್ ಜಿತ್ ಸಿಂಗ್ 54,000 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ.
ಪಂಜಾಬ್ ನಲ್ಲಿ 117 ಸೀಟುಗಳ ಪೈಕಿ ಎಎಪಿ 90 ಸೀಟು ಗಳಿಸಿದರೆ, ಕಾಂಗ್ರೆಸ್ 18 ಸೀಟುಗಳನ್ನಷ್ಟೇ ಪಡೆದುಕೊಳ್ಳಲು ಶಕ್ತವಾಗಿದೆ. ಇನ್ನು ಬಿಜೆಪಿ ಕೇವಲ 2, ಶಿರೋಮಣಿ ಅಕಾಲಿದಳ 6 ಸೀಟು ಪಡೆದಿವೆ.
ಚರಣ್ ಜಿತ್ ಸಿಂಗ್ ಚನ್ನಿ ಕಳೆದ ಸೆಪ್ಟಂಬರ್ ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದರು. ಇದೇ ಮೊದಲ ಬಾರಿಗೆ ನವದೆಹಲಿ ಹೊರತುಪಡಿಸಿ ಆಮ್ ಆದ್ಮಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಪಂಜಾಬ್ ನಲ್ಲಿ ಪೂರ್ಣ ಪ್ರಮಾಣದ ಸರಕಾರ ಮಾಡಲು ಸಿದ್ಧತೆ ನಡೆಸುತ್ತಿದೆ.