ಬೆಂಗಳೂರು, ಮಾ 10 (DaijiworldNews/DB): ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಿ ನಗರದಲ್ಲಿ ಟ್ರಾಫಿಕ್ ಜಾಮ್ ಉಂಟಾಗಲು ಕಾರಣವಾಗುವುದನ್ನು ಬಿಟ್ಟು ತೀರ್ಥಯಾತ್ರೆ ಮಾಡಲಿ ಎಂದು ಸಚಿವ ಆರ್. ಅಶೋಕ್ ಲೇವಡಿ ಮಾಡಿದರು.
ಪಂಚರಾಜ್ಯ ಚುನಾವಣೆ ಮತ ಎಣಿಕೆ ಬಗ್ಗೆ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಮೂಲೆ ಗುಂಪಾಗುತ್ತಿದೆ ಎಂಬುದು ಫಲಿತಾಂಶಗಳಿಂದ ಸ್ಪಷ್ಟವಾಗುತ್ತದೆ. ಇಡೀ ದೇಶದಲ್ಲಿ ಪಂಜಾಬ್ ನಲ್ಲಿ ಮಾತ್ರ ಅಧಿಕಾರದಲ್ಲಿದ್ದ ಕಾಂಗ್ರೆಸ್ ಅಲ್ಲಿಯೂ ಹೀನಾಯ ಸೋಲಿನತ್ತ ಮುಖ ಮಾಡಿದೆ ಎಂದರು.
ಪಂಚರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ವಿಜಯದತ್ತ ದಾಪುಗಾಲಿಡುತ್ತಿದೆ. ನಾಲ್ಕು ರಾಜ್ಯಗಳಲ್ಲಿ ಈಗಾಗಲೇ ಬಿಜೆಪಿ ಬಹುಮತ ಪಡೆಯುತ್ತಿದೆ ಎಂದವರು ತಿಳಿಸಿದರು.
ರಾಜ್ಯದಲ್ಲಿ ಮುಂದೆ ನಡೆಯುವ ಚುನಾವಣೆಗೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ದಿಕ್ಸೂಚಿಯಾಗಲಿದೆ. 2023ರಲ್ಲಿಯೂ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರ ಪಡೆಯಲಿದೆ ಎಂದರು.