ಲಕ್ನೋ, ಮಾ 10 (DaijiworldNews/MS): 2024ರ ಸಾರ್ವತ್ರಿಕ ಚುನಾವಣೆಯಿಂದ ದೃಷ್ಟಿಯಿಂದ ಮಹತ್ವ ಪಡೆದಿರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಸತತ 2 ನೇ ಬಾರಿಗೆ ಅಧಿಕಾರ ಹಿಡಿಯುವ ಲಕ್ಷಣ ಗೋಚರಿಸುತ್ತಿದೆ.
ಇಂದು ಬೆಳಗ್ಗೆ 8 ಗಂಟೆಗೆ ಆರಂಭವಾದ ಮತಎಣಿಕೆಯಲ್ಲಿ ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡು ಬಂದು ಬಿಜೆಪಿ ಸ್ಪಷ್ಟ ಬಹುಮತದತ್ತ ಸಾಗಿದ್ದು, ಮತ್ತೊಮ್ಮೆ ಅಧಿಕಾರ ಹಿಡಿಯುವ ಏರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರವರೆಗೆ 7 ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ನಡೆದಿತ್ತು. 403 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಟ್ಟು 4,441 ಅಭ್ಯರ್ಥಿಗಳು ಕಣದಲ್ಲಿದ್ದರು. ಇನ್ನು ಅಧಿಕಾರದ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 202ರ ಅವಶ್ಯಕತೆ ಇದೆ. ಈಗಾಗಲೇ ಬಿಜೆಪಿ ಮ್ಯಾಜಿಕ್ ನಂಬರ್ ಅನ್ನು ದಾಟಿ 238 ಸ್ಥಾನಗಳೊಂದಿಗೆ ಮುನ್ನುಗುತ್ತಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಮತ್ತೊಮ್ಮೆ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.
ಇನ್ನೊಂದೆಡೆ ತಾವು ಸ್ಪರ್ಧಿಸಿರುವ ಗೋರಖ್ಪುರ್ ಕ್ಷೇತ್ರದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಭಾರೀ ಅಂತರದಲ್ಲಿ ಭರ್ಜರಿ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ. ಅಂತಿಮ ಸ್ಪಷ್ಟ ಫಲಿತಾಂಶ ಮಧ್ಯಾಹ್ನದ ವೇಳೆ ಹೊರಬೀಳುವ ಸಾಧ್ಯತೆ ಇದೆ.