ಪಂಜಾಬ್, ಮಾ 10 (DaijiworldNews/DB): ಪಂಜಾಬ್ ನಲ್ಲಿ ಆಮ್ ಆದ್ಮಿ ಪಕ್ಷವು ಭಾರೀ ಮುನ್ನಡೆ ಸಾಧಿಸುತ್ತಿದ್ದು, ಗೆಲುವು ಬಹುತೇಕ ಖಚಿತವಾಗಿದೆ. ಇತ್ತ ಮ್ಯಾಜಿಕ್ ನಂಬರ್ ದಾಟುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.
ಮತ ಎಣಿಕೆ ಕೇಂದ್ರಗಳ ಹೊರಗೆ, ಪಕ್ಷದ ಕಚೇರಿ ಸೇರಿದಂತೆ ಹಲವೆಡೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು, ಬೆಂಬಲಿಗರ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ. ಒಟ್ಟು 117 ಕ್ಷೇತ್ರಗಳಲ್ಲಿ ಆಪ್ 72 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 20, ಎಸ್ ಎಡಿ 28, ಬಿಜೆಪಿ 4 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
117 ಸ್ಥಾನಗಳ ಪೈಕಿ ಅಧಿಕಾರದ ಗದ್ದುಗೆ ಏರಲು 59 ಸ್ಥಾನಗಳ ಅಗತ್ಯವಿದ್ದು, ಈ ಮ್ಯಾಜಿಕ್ ನಂಬರ್ ನ್ನು ದಾಟಿರುವುದರಿಂದ ಆಮ್ ಆದ್ಮಿ ಪಾರ್ಟಿ ಗೆಲುವಿನತ್ತ ದಾಪುಗಾಲಿಡುತ್ತಿದೆ.
ಈ ನಡುವೆ ಪಂಜಾಬ್ ನಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಗೆ ಈ ಚುನಾವಣಾ ಫಲಿತಾಂಶ ತೀವ್ರ ಮುಖಭಂಗಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವ ಕ್ಷೇತ್ರದಲ್ಲಿ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ಹಾಲಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ ಬದೌರ್ ಹಾಗೂ ಚಮ್ ಕೌರ್ ಸಾಹಿಬ್ ಕೂಡಾ ತಮ್ಮ ಕ್ಷೇತ್ರದಲ್ಲಿ ಹಿನ್ನಡೆ ಗಳಿಸಿದ್ದಾರೆ.