ಲಕ್ನೋ/ ಪಣಜಿ, ಮಾ 10 (DaijiworldNews/MS): ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮತಎಣಿಕೆ ಆರಂಭವಾಗಿದೆ. ಉತ್ತರಪ್ರದೇಶ ಬಿಜೆಪಿ ಮುನ್ನಡೆ ಯಲ್ಲಿದ್ದರೆ, ಗೋವಾದಲ್ಲಿ ಕಾಂಗ್ರೆಸ್ ಮುನ್ನಡೆ ಗಳಿಸಿದೆ.
ಉತ್ತರಪ್ರದೇಶದಲ್ಲಿಆರಂಭಿಕ ಮಾಹಿತಿಯಂತೆ 127 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆಯಲ್ಲಿದ್ದು 64 ಸ್ಥಾನಗಳಲ್ಲಿ ಸಮಾಜವಾದಿ ಪಕ್ಷ ಮುನ್ನಡೆ ಹಾಗೂ ಬಿಎಸ್ಪಿ 05, ಐಎನ್ ಸಿ -3 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರವರೆಗೆ 7 ಹಂತಗಳಲ್ಲಿ ನಡೆದ ವಿಧಾನಸಭಾ ಚುನಾವಣೆ ನಡೆಯಿತು. 403 ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಒಟ್ಟು 4,441 ಅಭ್ಯರ್ಥಿಗಳ ಭವಿಷ್ಯವನ್ನು ಇಂದಿನ ಫಲಿತಾಂಶ ನಿರ್ಧರಿಸುತ್ತದೆ.
ಗೋವಾ:
ಇನ್ನು ಗೋವಾದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಸಿದ್ಧತೆ ನಡೆಸಿದ್ದು, ಸದ್ಯದ ಮಾಹಿತಿ ಪ್ರಕಾರ 20 ಕ್ಷೇತ್ರಗಳಲ್ಲಿ ಕೈ ಮುನ್ನಡೆ ಸಾಧಿಸಿದೆ. ಗೋವಾದಲ್ಲಿ ಅಧಿಕಾರ ನಡೆಸಲು ಮ್ಯಾಜಿಕ್ ನಂಬರ್ 21 ಸ್ಥಾನ ಬೇಕಿದೆ. ಗೋವಾದಲ್ಲಿ ಈಗಾಗಲೇ ರೆಸಾರ್ಟ್ ರಾಜಕೀಯ ಪ್ರಾರಂಭವಾಗಿದ್ದು , ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಮಡಗಾಂವ್ ಹೋಟೆಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಾಸ್ತವ್ಯ ಹೂಡಿದ್ದಾರೆ.
ಗೋವಾದಲ್ಲಿ 40 ಸ್ಥಾನಗಳಿದ್ದು, 332 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್-ಜಿಎಫ್ಪಿ ತಲಾ 40 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಆಮ್ ಆದ್ಮಿ ಪಕ್ಷದಿಂದ 39 ಅಭ್ಯರ್ಥಿಗಳು ಕಣದಲ್ಲಿದ್ದಾರೆ.