ಮೈಸೂರು, ಮಾ 09 (DaijiworldNews/DB): ಮಂಡ್ಯದಲ್ಲಿ ನಾನು ಮಾಡಿದ ಕೆಲಸಗಳ ಕ್ರೆಡಿಟ್ ನ್ನು ಬೇರೆಯವರು ತೆಗೆದುಕೊಳ್ಳುತ್ತಿದ್ದಾರೆ. ಕ್ರೆಡಿಟ್ ಗಾಗಿ ನಾನು ಕೆಲಸ ಮಾಡುತ್ತಿಲ್ಲ. ಜನಸೇವೆ ಮತ್ತು ಅಭಿವೃದ್ಧಿಯಷ್ಟೇ ನನ್ನ ಆದ್ಯತೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಕೆಲಸಕ್ಕಿಂತ ಕ್ರೆಡಿಟ್ ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಾನು ಮಾಡಿದ ಕೆಲಸಗಳಿಗೆ ಬೇರೆಯವರು ಕ್ರೆಡಿಟ್ ಪಡೆಯುತ್ತಿದ್ದಾರೆ. ನನ್ನ ಕೆಲಸಗಳನ್ನು ಬೇರೆಯವರು ತಮ್ಮ ಕೆಲಸ ಎಂದು ಬಿಂಬಿಸಿಕೊಂಡರೆ ಸುಮ್ಮನಿರಲು ಸಾಧ್ಯವಿಲ್ಲ ಎಂದರು.
ನಾನು ಎಂದಿಗೂ ಕ್ರೆಡಿಟ್ ಗಾಗಿ ಕೆಲಸ ಮಾಡಲಾರೆ. ಅಭಿವೃದ್ಧಿ ಮಾತ್ರ ನನ್ನ ಗುರಿ. ನಾನು ಜನಪರವಾಗಿದ್ದೇನೆಂಬ ಕಾರಣಕ್ಕೆ ಭಯದಿಂದ ನನ್ನನ್ನು ಟಾರ್ಗೆಟ್ ಮಾಡುತ್ತಿರುವುದು ಮೊದಲಿನಿಂದಲೂ ನಡೆಯುತ್ತಿದೆ ಎಂದ ಅವರು, ಶಿಂಷಾ ಸೇತುವೆ ವಿಚಾರವಾಗಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದಲ್ಲದೆ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ಈ ವಿಚಾರವಾಗಿ ಪತ್ರ ಬರೆದಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿ, ಸಮಸ್ಯೆ ನಿವಾರಣೆ ವಿಚಾರವಾಗಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದ್ದೇನೆ ಎಂದವರು ತಿಳಿಸಿದರು.