ನವದೆಹಲಿ, ಮಾ 09 (DaijiworldNews/DB): ಉಕ್ರೇನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಬಾಂಗ್ಲಾದೇಶದ 9 ಮಂದಿಯನ್ನು ರಕ್ಷಣೆ ಮಾಡಿದ್ದಕ್ಕೆ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ.
ಯುದ್ಧಗ್ರಸ್ಥ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ತಾಯ್ನಾಡಿಗೆ ಕರೆ ತರಲು ಕೇಂದ್ರ ಸರಕಾರ ’ಆಪರೇಷನ್ ಗಂಗಾ’ ಕಾರ್ಯಾಚರಣೆ ನಡೆಸುತ್ತಿದೆ. ಈ ಕಾರ್ಯಾಚರಣೆಯಡಿ ಬಾಂಗ್ಲಾ, ನೇಪಾಳ, ಟುನೀಶಿಯನ್, ಪಾಕಿಸ್ತಾನ ಮುಂತಾದೆಡೆಗಳ ವಿದ್ಯಾರ್ಥಿಗಳೂ ತಮ್ಮ ತಮ್ಮ ದೇಶಗಳಿಗೆ ಮರಳಲು ಸಾಧ್ಯವಾಗಿದೆ.
ಬಾಂಗ್ಲಾದ 9 ಮಂದಿ ಪ್ರಜೆಗಳು ಭಾರತದ ಈ ಕಾರ್ಯಾಚರಣೆಯಡಿ ತಮ್ಮ ದೇಶವನ್ನು ಸೇರಿಕೊಂಡಿದ್ದಾರೆ. ಬಾಂಗ್ಲಾ ಪ್ರಜೆಗಳನ್ನು ಕರೆ ತಂದಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಎಂಬುದಾಗಿ ಶೇಖ್ ಹಸೀನಾ ತಿಳಿಸಿದ್ದಾರೆ ಎಂಬುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.