ನವದೆಹಲಿ, ಮಾ 09 (DaijiworldNews/DB): ತಮಿಳುನಾಡಿನ ಯುವಕ ಉಕ್ರೇನ್ ಪಡೆ ಸೇರಿದ ಬೆನ್ನಲ್ಲೇ ನೌಕಾಪಡೆಯ ಇಬ್ಬರು ನಿವೃತ್ತ ಯೋಧರೂ ಸೇರಿದಂತೆ ಕೆಲವು ಭಾರತೀಯರು ರಷ್ಯಾ ವಿರುದ್ಧದ ಸಮರದಲ್ಲಿ ಯುಕ್ರೇನ್ ಜೊತೆ ಕೈಜೋಡಿಸಲು ಮುಂದೆ ಬಂದಿದ್ದಾರೆ.
ಸಾಂದರ್ಭಿಕ ಚಿತ್ರ
ದೆಹಲಿಯಲ್ಲಿರುವ ಉಕ್ರೇನ್ ರಾಜತಾಂತ್ರಿಕ ಕಚೇರಿಗೆ ಈ ಬಗ್ಗೆ ಲಿಖಿತ ಪ್ರಸ್ತಾಪ ನೀಡಿರುವ ಕೆಲ ಭಾರತೀಯರು, ಉಕ್ರೇನ್ ಸೇನೆಗೆ ಬೆಂಬಲಿಸಿ ರಷ್ಯಾ ವಿರುದ್ಧ ಹೋರಾಡಲು ಅವಕಾಶ ನೀಡಬೇಕು, ಅದಕ್ಕಾಗಿ ವೀಸಾ ನೀಡಬೇಕು ಎಂದು ಕೇಳಿದ್ದಾರೆ.
ಉಕ್ರೇನ್ನಲ್ಲಿ ಕಲಿಕಾನಿರತನಾಗಿದ್ದ ತಮಿಳುನಾಡು ಮೂಲದ 21 ವರ್ಷದ ಯುವಕ ಸೈನಿಕೇಶ್ ರವಿಚಂದ್ರನ್ ಉಕ್ರೇನ್ ಸೈನ್ಯಕ್ಕೆ ಸೇರಿರುವ ವರದಿಗಳು ಮಂಗಳವಾರವಷ್ಟೆ ಪ್ರಕಟವಾಗಿದ್ದವು. ಇದರ ಬೆನ್ನಲ್ಲೇ ಇನ್ನಷ್ಟು ಭಾರತೀಯರು ಉಕ್ರೇನ್ ಬೆಂಬಲಕ್ಕೆ ಮುಂದೆ ಬರುತ್ತಿದ್ದಾರೆ. ಆದರೆ ಭಾರತ ಸರ್ಕಾರ ರೂಪಿಸಿರುವ ನಿಯಮಗಳ ಅನ್ವಯ ಭಾರತೀಯರಿಗೆ ವಿದೇಶದ ನೆಲಗಳಲ್ಲಿ ನಡೆಯುವ ಸಂಘರ್ಷಗಳಲ್ಲಿ ಹೋರಾಟ ನಡೆಸಲು ಅವಕಾಶ ಇಲ್ಲ ಎನ್ನಲಾಗಿದೆ.
ಈ ನಡುವೆ ತನ್ನನ್ನು ಬೆಂಬಲಿಸುವ ವಿದೇಶಿಯರಿಗಾಗಿ ಉಕ್ರೇನ್ ವಿಶೇಷ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಉಕ್ರೇನ್ ಪರ ಹೋರಾಡಲು ಇಚ್ಛಿಸುವ ವಿದೇಶಿಯರು ತಮ್ಮ ದೇಶಗಳಲ್ಲಿರುವ ರಾಯಭಾರ ಕಚೇರಿಗಳನ್ನು ಸಂಪರ್ಕಿಸಬೇಕು. ಇಮೇಲ್ ಅಥವಾ ಫೋನ್ ಕಾಲ್ ಮೂಲಕ ಅಲ್ಲಿನ ಸಿಬಂದಿ ಜೊತೆ ಮಾತುಕತೆ ನಡೆಸಬೇಕು. ಬಳಿಕ ಉಕ್ರೇನ್ನ ಸೇನಾಧಿಕಾರಿಗಳು ಸಂದರ್ಶನ ನಡೆಸಿ ಆಸಕ್ತ ಅರ್ಹರನ್ನು ತಮ್ಮ ಪಡೆಗಳ ನೆರವಿಗೆ ಕರೆಸಿಕೊಳ್ಳುತ್ತಾರೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.
ಆದರೆ, ಈ ಕುರಿತು ಸುದ್ಧಿಸಂಸ್ಥೆಯೊಂದು ಉಕ್ರೇನ್ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದಾಗ ‘ನಾವು ಸದ್ಯಕ್ಕೆ ಯಾವುದೇ ರೀತಿಯ ವೀಸಾಗಳನ್ನು ನೀಡುತ್ತಿಲ್ಲ. ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ’ ಎಂದು ಅಲ್ಲಿನ ರಾಜತಾಂತ್ರಿಕ ಕಚೇರಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ ಎಂದು ತಿಳಿದು ಬಂದಿದೆ.