ತ್ರಿಪುರಾ, ಮಾ 08 (DaijiworldNews/DB): ಸರಕಾರದ ಶೇ. 33ರಷ್ಟು ಉದ್ಯೋಗಗಳನ್ನು ಮಹಿಳೆಯರಿಗೆ ಮೀಸಲಿಡಲಾಗುವುದು ಎಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತ್ರಿಪುರಾದಲ್ಲಿ ಘೋಷಿಸಿದ್ದಾರೆ.
ತ್ರಿಪುರಾದಲ್ಲಿ ಬಿಜೆಪಿ-ಐಪಿಎಫ್ಟಿ ಸರ್ಕಾರದ 4ನೇ ವಾರ್ಷಿಕೋತ್ಸವದ ಅಂಗವಾಗಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರಕಾರಿ ಕೆಲಸಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ತ್ರಿಪುರಾದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ನೀಡಲಾಗುವುದು ಎಂದರು.
ತ್ರಿಪುರಾದಲ್ಲಿ ಘೋರ ಅಪರಾಧಗಳಲ್ಲಿ ಶೇ. 30ರಷ್ಟು ಇಳಿಕೆಯಾಗಿದೆ. ಬಿಜೆಪಿಯ ಹಿರಿಯ ನಾಯಕ ಬಿಪ್ಲಬ್ ದೇಬ್ ಅವರ ಆಡಳಿತವು ರಾಜಕೀಯ ಹಿಂಸಾಚಾರವನ್ನು ಸಂಪೂರ್ಣ ತಡೆದಿದೆ. ಹಿಂದಿನ ಚುನಾವಣೆ ವೇಳೆ ನೀಡಿದ್ದ ಎಲ್ಲಾ ಭರವಸೆಗಳನ್ನು ಬಿಜೆಪಿ ಈಡೇರಿಸಿದೆ. ಮುಂದಿನ ವರ್ಷಾರಂಭಕ್ಕೆ ತ್ರಿಪುರಾ ವಿಧಾನಸಭಾ ಚುನಾವಣೆ ನಡೆಯಲಿದ್ದು, ಮತ ಕೇಳಲು ಇಲ್ಲಿನ ಜನರ ಮುಂದೆ ಮತ್ತೆ ಬರುವುದಾಗಿ ಅವರು ತಿಳಿಸಿದರು.
ತ್ರಿಪುರಾದಲ್ಲಿ ಯುವಜನರಿಗಾಗಿ 200 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಸ್ಥಾಪನೆ ಮಾಡಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.