ಬೆಂಗಳೂರು, ಮಾ 08 (DaijiworldNews/MS): ರಿಟೇಲ್ ಸ್ಟಾಕ್ ಬ್ರೋಕರೇಜ್ ಕಂಪನಿ ಜೆರೋಧಾ ಸಹ-ಸಂಸ್ಥಾಪಕ ನಿತಿನ್ ಕಾಮತ್ ಅವರು ತಮ್ಮ ಪತ್ನಿ ಸೀಮಾ ಅವರ ಕ್ಯಾನ್ಸರ್’ನೊಂದಿಗಿನ ಸ್ಪೂರ್ತಿದಾಯಕ ಹೋರಾಟವನ್ನು ಮಹಿಳಾ ದಿನಾಚರಣೆಯಂದು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
“ನನ್ನ ಪತ್ನಿ ಸೀಮಾ ಅವರು ಕಳೆದ ನವೆಂಬರ್ ನಿಂದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮತ್ತು ನಿಯಮಿತ ಆರೋಗ್ಯ ತಪಾಸಣೆ, ಆರೋಗ್ಯ ವಿಮೆ ಮತ್ತು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಜಾಗೃತಿ ಮೂಡಿಸಲು ಸೀಮಾ ತಮ್ಮ ಕ್ಯಾನ್ಸರ್ ನೊಂದಿಗಿನ ಪ್ರಯಾಣ ಮತ್ತು ಕಲಿಕೆಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ. ಮಹಿಳಾ ದಿನಾಚರಣೆಯ ಶುಭಾಶಯಗಳು” ಎಂದು ಕಾಮತ್ ಅವರು ಬ್ಲಾಗ್ ಪುಟದ ಲಿಂಕ್ನೊಂದಿಗೆ ಟ್ವೀಟ್ ಮಾಡಿದ್ದಾರೆ, ಈ ಬ್ಲಾಗ್ ನಲ್ಲಿ ಸೀಮಾ ಅವರು ತಮ್ಮ ಕ್ಯಾನ್ಸರ್ ನೊಂದಿಗಿನ ಹೋರಾಟವನ್ನು ವಿವರಿಸಿದ್ದಾರೆ.
ರಿಟೇಲ್ ಸ್ಟಾಕ್ ಬ್ರೋಕರೇಜ್ ಕಂಪನಿ ಜೆರೋಧಾ ಕೇವಲ 10 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಸಂಸ್ಥೆಯಾಗಿದೆ. ಈ ಸಂಸ್ಥೆ ಇದೀಗ ದೇಶದ ಅತಿ ದೊಡ್ಡ ಆನ್ಲೈನ್ ಷೇರು ಬ್ರೋಕರೇಜ್ ಕಂಪನಿಯಾಗಿ ಹೊರಹೊಮ್ಮಿದೆ. ಅಪ್ಪಟ ಕನ್ನಡಿಗ ನಿತಿನ್ ಕಾಮತ್, ಅವರ ಸೋದರ ನಿಖಿಲ್ ಕಾಮತ್ ಸೇರಿ ಬೆಳೆಸಿದ ಜೆರೋಧಾ ಭಾರತದಲ್ಲಿ ಹಲವು ಹೊಸ ದಾಖಲೆಗಳೊಂದಿಗೆ ಕಾರ್ಪೊರೇಟ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಕಳೆದ ಒಂದೇ ವರ್ಷದಲ್ಲಿ ಕಂಪನಿಯ ಲಾಭ ಇಮ್ಮಡಿಗೂ ಹೆಚ್ಚಳವಾಗಿದ್ದು, 1000 ಕೋಟಿ ರೂ. ದಾಟಿ ಬೆಳೆದು ನಿಂತಿದೆ.