ಚೆನ್ನೈ, ಮಾ 08 (DaijiworldNews/DB): ಭಾರತೀಯ ಸೇನೆಯಿಂದ ಎರಡು ಬಾರಿ ತಿರಸ್ಕೃತಗೊಂಡ ತಮಿಳುನಾಡಿನ 21 ವರ್ಷದ ಯುವಕನೋರ್ವ ಇದೀಗ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಸೇನೆಗೆ ಸೇರಿದ್ದಾನೆ.
ತಮಿಳುನಾಡಿನ ಸೈನಿಕೇಶ್ ರವಿಚಂದ್ರನ್ ಅವರೇ ಉಕ್ರೇನ್ ಪ್ಯಾರಾಮಿಲಿಟರಿ ಪಡೆಗೆ ಸೇರ್ಪಡೆಗೊಂಡ ಯುವಕ.
ಯುವಕ ಉಕ್ರೇನ್ ಸೇನೆ ಸೇರಿರುವ ಕುರಿತು ಮಾಹಿತಿ ಬಂದ ತತ್ ಕ್ಷಣ ಅಧಿಕಾರಿಗಳು ಆತನ ಮನೆಗೆ ಭೇಟಿ ನೀಡಿದ್ದು, ಪೋಷಕರಲ್ಲಿ ವಿಚಾರಿಸಿದ್ದಾರೆ. ಆತ ಭಾರತೀಯ ಸೇನೆ ಸೇರಲು ಎರಡು ಬಾರಿ ಅರ್ಜಿ ಸಲ್ಲಿಸಿದ್ದು, ಎರಡು ಸಲವೂ ತಿರಸ್ಕರಿಸಲಾಗಿತ್ತು. ಆದರೆ ಆತನಿಗೆ ಸೇನೆ ಸೇರಲೇಬೇಕೆಂಬ ಮಹದಾಸೆ ಇತ್ತು ಎಂದು ಪೋಷಕರು ತಿಳಿಸಿದ್ದಾರೆ.
ಸೈನಿಕೇಶ್ 2018ರಲ್ಲಿ ಯುಕ್ರೇನ್ ಗೆ ತೆರಳಿದ್ದು, ಖಾರ್ಕೀವ್ ನಲ್ಲಿರುವ ರಾಷ್ಟ್ರೀಯ ಅಂತರಿಕ್ಷಯಾನ ವಿವಿಯಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಈ ಜುಲೈ ವೇಳೆಗೆ ವಿದ್ಯಾಭ್ಯಾಸ ಪೂರ್ಣಗೊಳ್ಳುವುದರಲ್ಲಿತ್ತು. ಇದೀಗ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಸೇನೆ ಸೇರಿರುವುದಾಗಿ ಆತ ಪೋಷಕರಿಗೆ ಮಾಹಿತಿ ನೀಡಿದ್ದಾನೆ ಎಂಬುದಾಗಿ ತಿಳಿದು ಬಂದಿದೆ.