ಬೆಂಗಳೂರು, ಮಾ 07 (DaijiworldNews/HR): ಬಜೆಟ್ ಮಂಡನೆ ಮಾಡುವಾಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಮೇಲೆ ಅವರ ತಂದೆಗಿಂತ ಆರ್ಎಸ್ಎಸ್ ಪ್ರಭಾವವೇ ಹೆಚ್ಚಾಗಿ ಬೀರಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಅವರ ಪ್ರಥಮ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ನಾನು ಇಟ್ಟುಕೊಂಡಿದ್ದೆ, ಆದರೆ ಬಜೆಟ್ ನಂತರ ಆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದೆ. ಇದು ಬೊಮ್ಮಾಯಿ ಬಜೆಟ್ ಅಲ್ಲ, ಆರ್ಎಸ್ಎಸ್ ಬಜೆಟ್ ಎಂದರು.
ಇನ್ನು ಆರ್ಎಸ್ಎಸ್ ನವರು ಯಾರಾದರೂ ಇಂಥಾ ಬಜೆಟ್ ಮಂಡಿಸಿದ್ದರೆ ನನಗೇನು ಬೇಸರ ಆಗುತ್ತಾ ಇರಲಿಲ್ಲ, ಆದರೆ 2008 ರ ವರೆಗೆ ಆರ್ಎಸ್ಎಸ್ ಬಿಜೆಪಿ ಸಂಪರ್ಕವಿಲ್ಲದೆ ಆ ನಂತರ ಬಿಜೆಪಿ ಸೇರಿದ ಬೊಮ್ಮಾಯಿ ಅವರು ಇಂಥಾ ಬಜೆಟ್ ಮಂಡನೆ ಮಾಡುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಎಸ್.ಆರ್ ಬೊಮ್ಮಾಯಿ ಅವರ ಪ್ರಭಾವ ಬಸವರಾಜ ಬೊಮ್ಮಾಯಿ ಅವರ ಮೇಲಿದೆ ಎಂದು ನಂಬಿದ್ದೆ, ಆದರೆ ಅವರ ತಂದೆಯ ಪ್ರಭಾವಕ್ಕಿಂತ ಆರ್ಎಸ್ಎಸ್ ಅವರ ಪ್ರಭಾವವೇ ಹೆಚ್ಚು ಬೀರಿರುವಂತೆ ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.