ಬೆಂಗಳೂರು, ಮಾ 07 (DaijiworldNews/MS): ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಯಾಗಿರುವ ವಕೀಲ ಜಗದೀಶ್ ಕೆ.ಎನ್. ಮಹಾದೇವ್ ಅವರಿಗೆ ನಗರದ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ನ್ಯಾಯಾಲಯದಲ್ಲಿ ನಡೆದಿದ್ದ ಗಲಾಟೆ ವೇಳೆ ವಕೀಲರೊಬ್ಬರ ಕೊಲೆಗೆ ಯತ್ನಿಸಿದ್ದ ಆರೋಪದಡಿ ಜಗದೀಶ್ ಅವರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದಲ್ಲಿ ಜಗದೀಶ್ ಅವರಿಗೆ ಇತ್ತೀಚೆಗಷ್ಟೇ ನ್ಯಾಯಾಲಯ ಜಾಮೀನು ನೀಡಿತ್ತು. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಜಗದೀಶ್ಗೆ ಕೊಲೆ ಯತ್ನ ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಜಾತಿ ನಿಂದನೆ ಪ್ರಕರಣದಿಂದಾಗಿ ಹೊರಗೆ ಬಂದಿರಲಿಲ್ಲ. ಕೊಡಿಗೇಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಜಾತಿ ನಿಂದನೆ ಪ್ರಕರಣದಲ್ಲೂ ಅವರಿಗೆ ಜಾಮೀನು ಸಿಕ್ಕಿದ್ದು, ಸದ್ಯದಲ್ಲೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ನಿವಾಸಿಯಾದ ಮುತ್ತಯ್ಯ ಎಂಬವರು ಫೆಬ್ರವರಿ 14ರಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯಿದೆ ಮತ್ತು ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿ ಕೊಡಿಗೇಹಳ್ಳಿ ಠಾಣೆಯಲ್ಲಿ ಜಗದೀಶ್ ಅವರ ವಿರುದ್ದ ದೂರು ದಾಖಲಿಸಿದ್ದರು.