ಮುಂಬೈ, ಮಾ 07 (DaijiworldNews/HR): ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಹಾರಾಷ್ಟ್ರ ಕ್ಯಾಬಿನೆಟ್ ಸಚಿವ ಮತ್ತು ಎನ್ ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ವಿಶೇಷ ನ್ಯಾಯಾಲಯ ಸೋಮವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಫೆಬ್ರವರಿ 23 ರಂದು ಜಾರಿ ನಿರ್ದೇಶನಾಲಯ(ಇಡಿ)ವು ನವಾಬ್ ಅವರನ್ನು ದಕ್ಷಿಣ ಮುಂಬೈನಲ್ಲಿರುವ ತನಿಖಾ ಸಂಸ್ಥೆಯ ಕಚೇರಿಯಲ್ಲಿ ಸುಮಾರು ಐದು ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ಬಂಧಿಸಿತ್ತು. ಅಲ್ಲದೆ ಹೆಚ್ಚಿನ ವಿಚಾರಣೆಗಾಗಿ ಮಲಿಕ್ ಅವರನ್ನು ಮಾರ್ಚ್ 7ರ ವರೆಗೆ ತನ್ನ ವಶಕ್ಕೆ ಪಡೆದಿತ್ತು.
ಇನ್ನು ಇಡಿ ವಶದಲ್ಲಿದ್ದ ಮಲಿಕ್ ಅವರನ್ನು ವಿಶೇಷ ನ್ಯಾಯಾಧೀಶ ಆರ್ ಎನ್ ರೋಕಡೆ ಅವರ ಮುಂದೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಮುಂಬೈನ ಕುರ್ಲಾದಲ್ಲಿ ಮೂರು ಎಕರೆ ಜಾಗಕ್ಕಾಗಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹೋದರಿ ಹಸೀನಾ ಪರ್ಕರ್ ಗೆ 20 ವರ್ಷಗಳ ಹಿಂದೆ ನವಾಬ್ ಮಲಿಕ್ 55 ಲಕ್ಷ ರೂ. ನಗದು ನೀಡಿದ್ದರು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.